ಕರ್ನಾಟಕ

ಕೊಡಗಿನಲ್ಲಿ ಹಲವೆಡೆ ಬಿರುಕು ಬಿಟ್ಟ ಭೂಮಿ: ಮತ್ತೆ ಮರುಕಳಿಸಲಿದೆಯೇ ಎರಡು ವರ್ಷಗಳ ಹಿಂದಿನ ಭೀಕರತೆ?

Pinterest LinkedIn Tumblr


ಕೊಡಗು (ಜೂ.12): ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ಆತಂಕ ಜನರ ಮನಸಿನಿಂದ ಇನ್ನೂ ದೂರವಾಗಿಲ್ಲ. ಬಂದ ಗಂಡಾಂತರ ಮುಗಿದು ಹೋಯಿತೆಂದು ಜನರು ಕೃಷಿ ಮಾಡುತ್ತಾ ತಮ್ಮ ಬದುಕ ಮತ್ತೆ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ಎರಡು ವರ್ಷಗಳ ಹಿಂದೆ ಭೂಕುಸಿತ ಸಂಭವಿಸಿದ್ದ ಸ್ಥಳಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

ಕರ್ನಾಟಕದ ಕಾಶ್ಮೀರ, ಮಂಜಿನ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮಡಿಕೇರಿ, ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ 2018 ರಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಎಮ್ಮೆತಾಳು, ಮೇಘತಾಳು, ಜೋಡುಪಾಲ, ಮದೆನಾಡು ಕಾಟಿಕೇರಿ ಸೇರಿದಂತೆ ಒಟ್ಟು 37 ಗ್ರಾಮಗಳು ಭೂಕುಸಿತಕ್ಕೆ ನಲುಗಿ ಹೋಗಿದ್ದವು. ಅದರಲ್ಲಿ ಎರಡನೇ ಮೊಣ್ಣಂಗೇರಿಯೂ ತೀವ್ರ ಸಮಸ್ಯೆ ಎದುರಿಸಿದ ಗ್ರಾಮಗಳಲ್ಲಿ ಒಂದು.

ಸುತ್ತಲೂ ಬೆಟ್ಟಗುಡ್ಡಗಳ ಹೊದ್ದು, ಹಸಿರು ಕಾನನಗಳಿಂದ ಕಂಗೊಳಿಸುವ ಮೊಣ್ಣಂಗೇರಿ, ಭೂಕುಸಿತದಿಂದ ಸ್ಮಶಾನದಂತೆ ಆಗಿತ್ತು. ಮುಗಿಲೆತ್ತರದ ಬೆಟ್ಟಗಳೇ ಉರುಳಿದ್ದರಿಂದ 20 ಕ್ಕೂ ಹೆಚ್ಚು ಮನೆಗಳು ಭೂಮಿಯಾಳಕ್ಕೆ ಸೇರಿ ಹೋದವು. ಆದರೂ ಉಳಿದ 50 ಕ್ಕೂ ಹೆಚ್ಚು ಕುಟುಂಬಗಳು ಮಾತ್ರ ಯಾವುದಕ್ಕೂ ಎದೆಗುಂದದೆ ಅಲ್ಲಿಯೇ ಕೃಷಿ ಮಾಡುತ್ತಾ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹೇಗೋ ಬಂದ ಗಂಡಾಂತರ ಮುಗಿದು ಹೋಯಿತು ಎನ್ನೋ ಒತ್ತಿಗೆ ಮೊಣ್ಣಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ಮತ್ತೆ ಆತಂಕ ಎದುರಾಗಿದೆ.

2018 ರಲ್ಲಿ ಭೂಮಿ ಕುಸಿದಾಗ ಮೊಣ್ಣಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕಣ್ಮರೆಯಾಗಿತ್ತು. ಒಂದು ವರ್ಷದ ಬಳಿಕ ಮತ್ತೆ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಸೇರಿದಂತೆ ಸುತ್ತಮುತ್ತಲ ಸುಮಾರು ಎಕರೆಯಷ್ಟು ಪ್ರದೇಶ ಬರೋಬ್ಬರಿ 10 ಅಡಿಯಷ್ಟು ಆಳಕ್ಕೆ ಹೋಗಿದೆ. ಒಂದು ವೇಳೆ ಈ ಭೂಮಿ ಕುಸಿದಲ್ಲಿ ಇಡೀ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಕೊಳ್ಳುತ್ತದೆ ಎನ್ನೋದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮದ ಮೊಣ್ಣಪ್ಪ.

ಮೊಣ್ಣಂಗೇರಿ ಗ್ರಾಮಕ್ಕೆ ಮದೆನಾಡಿನ ಮುಖ್ಯ ರಸ್ತೆಯಿಂದ ಐದು ಕಿಲೋ ಮೀಟರ್ ಸಾಗಬೇಕು. ಮಾರ್ಗ ಮಧ್ಯೆ ನಾಲ್ಕೈದು ತಿರುವುಗಳಲ್ಲಿ ಭಾರೀ ಭೂಕುಸಿತವಾಗಿದ್ದು, ಇಲ್ಲೆಲ್ಲವೂ ರಸ್ತೆ ಪುನರ್ ನಿರ್ಮಾಣ ಮಾಡಲಾಗಿತ್ತು. ಇದೀಗ ಮಳೆ ಆರಂಭವಾಗಿದ್ದು, ಹಲವೆಡೆ ಭೂಮಿ ಬಿರುಕುಬಿಟ್ಟಿದೆ. ಅಲ್ಲದೆ, ಮೊಣ್ಣಂಗೇರಿ ಶಾಲೆ ಬಳಿ ರಸ್ತೆ ಸೇರಿ ಎಕರೆಯಷ್ಟು ಪ್ರದೇಶ 10 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಇದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈ ಪ್ರದೇಶದಲ್ಲೆಲ್ಲಾ ಮತ್ತೆ ಭೂಮಿ ಕುಸಿಯುವ ಆತಂಕ ಎದುರಾಗಿದೆ. ಮಳೆಗಾಲ ಮುಗಿಯುವವರೆಗೆ ಬೇರೆಡೆಗೆ ತೆರಳೋಣ ಎಂದುಕೊಂಡರೆ, ಸದ್ಯ ಕೊರೋನಾ ಆತಂಕವೂ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳು ಮರಿಗಳನ್ನು ಎಲ್ಲಿಗೆ ಕರೆದೊಯ್ಯುವುದು ಎನ್ನೋದು ಜನರ ಆತಂಕ.

ಒಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಹತ್ತಾರು ಗ್ರಾಮಗಳಲ್ಲಿ ಇನ್ನಿಲ್ಲದಂತೆ ಭೂಕುಸಿತವೂ ಆಗಿತ್ತು. ಇದೀಗ ಮೊಣ್ಣಂಗೇರಿಯ ಸುತ್ತಮುತ್ತ ಭೂಮಿ ಬಿರುಕುಬಿಟ್ಟಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.

Comments are closed.