ರಾಷ್ಟ್ರೀಯ

ಒಡಿಶಾದ ಮಹಾನದಿಯಲ್ಲಿ ಮುಳುಗಿಹೋಗಿದ್ದ ಪುರಾತನ ದೇವಸ್ಥಾನವೊಂದು ಪತ್ತೆ

Pinterest LinkedIn Tumblr


ಭುಬನೇಶ್ವರ್(ಜೂನ್ 14): ಕಟಕ್ ಜಿಲ್ಲೆಯ ಬೈದೇಶ್ವರದ ಬಳಿ ಮಹಾನದಿಯಲ್ಲಿ ಮುಳುಗಿಹೋಗಿರುವ ದೇವಸ್ಥಾನವೊಂದು ಸಿಕ್ಕಿದೆ. ಮಹಾನದಿ ಕಣಿವೆಯಲ್ಲಿರುವ ಪಾರಂಪರಿಕ ತಾಣಗಳ ಸಂಗ್ರಹ ಯೋಜನೆಯ ವೇಳೆ ಈ ಪುರಾತನ ಮಂದಿರದ ಇರುವಿಕೆಯನ್ನು ಇತ್ತೀಚೆಗಷ್ಟೇ ಕಂಡುಹಿಡಿಯಲಾಗಿತ್ತು. ಇದೀಗ ಮಹಾನದಿಯ ಮಧ್ಯ ಭಾಗದಲ್ಲಿ ಮಂದಿರ ಇರುವುದು ಪತ್ತೆಯಾಗಿದೆ.

ಇದು ಸುಮಾರು 500 ವರ್ಷದ ಹಳೆಯ ದೇವಸ್ಥಾನ ಇರಬಹುದು ಎಂದು ತಜ್ಞರು ಹೇಳುತ್ತಾರೆ. ಮಸ್ತಕ ಶೈಲಿಯ ಕಟ್ಟಡ ನಿರ್ಮಾಣ, ಹಾಗೂ ಅದರಲ್ಲಿ ಬಳಸಿರುವ ವಸ್ತುಗಳ ಆಧಾರದ ಮೇಲೆ ಇದು 15-16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ನದಿಯಲ್ಲಿ ಮುಳುಗಿರುವ ಈ ದೇವಸ್ಥಾನವನ್ನು ಬೇರೆಡೆ ಸ್ಥಳಾಂತರ ಮಾಡುವ ಯೋಜನೆ ಇದೆ. ಭಾರತೀಯ ಪುರಾತತ್ವ ಇಲಾಖೆಯಲ್ಲಿ ಮಂದಿರ ಸ್ಥಳಾಂತರ ಮಾಡಬಲ್ಲ ಅನುಭವ ಹಾಗೂ ತಂತ್ರಜ್ಞಾನ ಇದೆ. ಮಂದಿರ ಪತ್ತೆ ಹಚ್ಚಿದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆ ಈ ಬಗ್ಗೆ ಒಡಿಶಾ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ಮನವಿ ಪತ್ರ ಬರೆಯಲಿದೆ.

INTACH ಸಂಸ್ಥೆ ತನ್ನ ಡಾಕ್ಯುಮೆಂಟೇಶನ್ ಪ್ರಾಜೆಕ್ಟ್ ವೇಳೆ ಮಹಾನದಿಯಲ್ಲಿ 65 ಪುರಾತನ ಮಂದಿರಗಳ ಸುಳಿವು ಪತ್ತೆ ಹಚ್ಚಿದೆ. ಹಿರಾಕುಡ್ ಜಲಾಶಯದಲ್ಲಿರುವ ಹಲವು ದೇವಸ್ಥಾನಗಳನ್ನೂ ಬೇರೆಡೆಗೆ ಸ್ಥಳಾಂತರ ಮಾಡಲು ಸಾಧ್ಯವಿದೆ ಎಂದು ಈ ಸಂಸ್ಥೆ ಹೇಳುತ್ತದೆ.

ಈಗ ಪತ್ತೆಯಾಗಿರುವ 500 ವರ್ಷದ ಹಳೆಯ ದೇವಸ್ಥಾನವು ಗೋಪಿನಾಥ ದೇವರದ್ದಾಗಿದೆ. ಈ ಮಂದಿರ ಇದ್ದ ಜಾಗ ಶತಪತನ ಎಂದು ಖ್ಯಾತವಾಗಿತ್ತು. ಆದರೆ, ಕಾಲಾಂತರದಲ್ಲಿ ಮಹಾನದಿಯ ಪಥ ಬದಲಾಗಿ ಇಡೀ ಗ್ರಾಮವೇ ಮುಳುಗಿಹೋಯಿತು ಎಂದು ಸ್ಥಳೀಯ ಹವ್ಯಾಸಿ ರಬೀಂದ್ರ ರಾಣಾ ಹೇಳುತ್ತಾರೆ. ಈ ಮಂದಿರವನ್ನು ಪತ್ತೆ ಹಚ್ಚಲು ರಬೀಂದ್ರ ರಾಣಾ ಅವರೇ ಪ್ರಮುಖವಾಗಿ ನೆರವಾಗಿದ್ದರು.

Comments are closed.