ಬೆಂಗಳೂರು (ಜೂ. 14): ಲಾಕ್ಡೌನ್ ಸಡಿಲಿಕೆ ನಂತರ ಹೋಟೆಲ್, ರೆಸ್ಟೋರೆಂಟ್ ಹಾಗೂ ಮಾಲ್‌ಗಳು ಆರಂಭವಾಗಿ ಒಂದು ವಾರವೇ ಕಳೆದಿದೆ. ಕಳೆದೊಂದು ವಾರ ವೀಕ್ ಡೇಸ್ ನಲ್ಲಿ ಜನರಿಂದ ಅಷ್ಟೇನು ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈ ವೀಕೆಂಡ್ ಡೇಸ್ ನಲ್ಲಿ ವ್ಯಾಪಾರಿಗಳಿಗೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ, ಸಿಲಿಕಾನ್ ಸಿಟಿಯ ಜನರು ಹೋಟೆಲ್ಗಳಿಗೆ ಹೋಗುತ್ತಿದ್ದರೂ ಮಾಲ್‌ಗಳತ್ತ ಇನ್ನೂ ಮುಖ ಮಾಡುತ್ತಿಲ್ಲ.
ಸುದೀರ್ಘ ಎರಡು ತಿಂಗಳ ಲಾಕ್ ಡೌನ್ ನಂತರ ಜನಜೀವನ ಮತ್ತೆ ಟ್ರ್ಯಾಕ್‌ಗೆ ಬರುವ ಪ್ರಯತ್ನ ನಡೆಸುತ್ತಿದೆ. ಕೊರೊನಾ ವೈರಸ್ ಭಯದ ನಡುವೆಯೂ ಜನರು ಹೊರಬರಲು, ಕರೆತರಲು ಹೋಟೆಲ್, ರೆಸ್ಟೋರೆಂಟ್ ಪ್ರಮುಖವಾಗಿ ಮಾಲ್ ನವರು ಸಾಕಷ್ಟು ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್ಗಳನ್ನು ತೆರೆಯಲಾಗಿದೆ. ಕಳೆದೊಂದು ವಾರ ವೀಕ್ ಡೇಸ್‌ನಲ್ಲಿ ಜನರು ಹೋಟೆಲ್ ಗೆ ಬಂದು ಅಲ್ಲಿಯೇ ಆಹಾರ ಸೇವಿಸುವುದಕ್ಕೆ ಬರುವವರ ಸಂಖ್ಯೆ ಶೇ.30-40 ಅಷ್ಟೆ. ಆದರೆ ವೀಕೆಂಡ್ಸ್‌ನಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ. ಶೇ.60ರಷ್ಟು ಜನರು ಸ್ನೇಹಿತರು, ಕುಟುಂಬ ಸಮೇತ ತಮ್ಮ ನೆಚ್ಚಿನ ಹೋಟೆಲ್ ಗೆ ಆಗಮಿಸಿ ತಿಂಡಿ, ತಿನಿಸು ಸವಿಯುತ್ತಿದ್ದ ದೃಶ್ಯ ಕಂಡುಬಂದಿತು.
ವೀಕೆಂಡ್ನಲ್ಲಿ ಜನರು ಹೆಚ್ಚು ಬರುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆ ಬಳಿಕ ಇಂದೇ ಅತಿ ಹೆಚ್ಚು ಗ್ರಾಹಕರು ಬಂದಿರುವುದು ಎಂದು ನೃಪತುಂಗ ರಸ್ತೆಯಲ್ಲಿರುವ ಹೋಟೆಲ್ ಮಾಲಿಕ ಕೃಷ್ಣರಾಜ್ ಮಾಹಿತಿ ನೀಡಿದರು. ಸಾಕಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆ ವೀಕೆಂಡ್ ಫ್ಯಾಮಿಲಿ ಸಮೇತ ತಿಂಡಿ ತಿನ್ನಲು ಬಂದಿದ್ದೇವೆ ಎಂದು ಗ್ರಾಹಕ ರಾಜು ಹೇಳುತ್ತಾರೆ. ಇನ್ನು ಬೆಂಗಳೂರಿನಲ್ಲಿ ಸಾಕಷ್ಟು ಮಾರ್ಗದರ್ಶಿ ಸೂಚನೆಯ ನಂತರ ಮಾಲ್‌ಗಳು ಓಪನ್ ಆಗಿ ಒಂದು ವಾರ ಕಳೆದಿದೆ. ಆದರೆ ರಾಜಧಾನಿಯಲ್ಲಿ ಮಾಲ್ ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಲಾಕ್ ಡೌನ್ ಸಡಲಿಕೆ ಬಳಿಕ ಮಾಲ್ ತೆರೆದರೂ ಬಂದ ವೀಕೆಂಡ್ ಸಪ್ಪೆಯಾಗಿ ಕಾಣುತ್ತಿತ್ತು. ಕೋರಮಂಗಲ ಫೋರಮ್ ಮಾಲ್, ಓರಾಯನ್ ಮಾಲ್, ಗರುಡಾ ಮಾಲ್ ಹೀಗೆ ಬಹುತೇಕ ಮಾಲ್‌ಗಳಲ್ಲಿ ಶನಿವಾರ, ಭಾನುವಾರ ಹೆಚ್ಚಿನ ಜನರು ಕಾಣಲಿಲ್ಲ.
Comments are closed.