ಕರ್ನಾಟಕ

ಲಾಕ್​ಡೌನ್​​​ ಪರಿಣಾಮ: ಬೆಂಗಳೂರಿನಲ್ಲಿ 2 ಸಾವಿರಕ್ಕೂ ಅಧಿಕ ಹೋಟೆಲ್ ಗಳು ತೆರೆಯೋದು ಡೌಟ್

Pinterest LinkedIn Tumblr


ಬೆಂಗಳೂರು(ಜೂ.12): ಸಿಲಿಕಾನ್‌ ಸಿಟಿ ಜನರು ತನ್ನಿಷ್ಟದ ಹೋಟೆಲ್ ರೆಸ್ಟೋರೆಂಟ್​ಗೆ ಹೋಗುವ ಮುನ್ನ ಒಮ್ಮೆ ಪರಿಶೀಲಿಸಿ. ಯಾಕೆಂದರೆ ನಿಮ್ಮ ನೆಚ್ಚಿನ ಹೋಟೆಲ್ ಮುಚ್ಚಿದ್ದರೂ ಮುಚ್ಚಿರಬಹುದು. ಹೌದು, ಲಾಕ್​​ಡೌನ್ ಮುಗಿದು ಅನ್​ಲಾಕ್ ಆದರೂ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದರಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಬರೋಬ್ಬರಿ ಎರಡು ಸಾವಿರ ಹೋಟೆಲ್ ಸದ್ಯ ಬಂದ್ ಇದ್ದು ತೆರೆಯೋದು ಡೌಟ್ ಆಗಿದೆ.

ಕಳೆದೆರಡು ತಿಂಗಳ ಲಾಕ್​​ಡೌನ್ ಸಂಕಷ್ಟ ರಾಜ್ಯದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೀಡಾಗಿದೆ. ಅದರಲ್ಲೂ ಫುಡ್ ಪ್ರಿಯರ ನೆಚ್ಚಿನ ಮಹಾನಗರಿ ಬೆಂಗಳೂರಿನಲ್ಲಿ ಇನ್ನಷ್ಟು ಪರಿಸ್ಥಿತಿ ಹದಗೆಟ್ಟಿದೆ. ಹೋಟೆಲ್​​ಗಳು ಪಾರ್ಸೆಲ್ ಸೇವೆ ಮಾತ್ರ ಆರಂಭಿಸಿದಾಗ ಸಾಕಷ್ಟು ನಿರೀಕ್ಷೆಗಳಿದ್ದವು. ಹೋಟೆಲ್​​ನಲ್ಲಿ ತಿನ್ನಲು ಅವಕಾಶ ಸಿಕ್ಕ‌ ಮೇಲೆ ಮತ್ತೆ‌ ಯಥಾಸ್ಥಿತಿ ಮರಳುತ್ತದೆ ಎಂದು ಹೋಟೆಲ್ ಮಾಲಿಕರು ಭಾವಿಸಿದ್ದರು. ಆದರೆ ಇದಾಗಿ ಒಂದು ವಾರ ಕಳೆದಿದೆ. ಪಾರ್ಸೆಲ್ ಸೇವೆ ಎರಡು ವಾರದ ಮೇಲೆ ಆಗಿದೆ. ಜನ ಮಾತ್ರ ಹೋಟೆಲ್​​ಗೆ ಬಂದು ತಿನ್ನುವುದಾಗಲಿ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿಲ್ಲ.

ಇದರ ನೇರ ಪರಿಣಾಮ ಹೋಟೆಲ್ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದು, ಶಾಶ್ವತವಾಗಿ ಹೋಟೆಲ್ ಬಂದ್ ಮಾಡಲು ಮಾಲೀಕರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ 21 ಸಾವಿರ ಹೋಟೆಲ್ ರೆಸ್ಟೋರೆಂಟ್ ಇವೆ. ನಾಲ್ಕು ಸಾವಿರ ಲಾಡ್ಜ್ ಕಮ್‌ ರೆಸ್ಟೋರೆಂಟ್​ಗಳಿವೆ. ಆದರೀಗ ಸುದೀರ್ಘ ಲಾಕ್​​ಡೌನ್ ಎಫೆಕ್ಟ್‌ನಿಂದಾಗಿ ಬೆಂಗಳೂರಿನ ಪ್ರತಿಷ್ಟಿತ ರೆಸ್ಟೋರೆಂಟ್ ಸೇರಿದಂತೆ ಸಾವಿರಾರು ಹೋಟೆಲ್ ಬಂದ್ ಆಗಿವೆ.

ಬೆಂಗಳೂರಿನಲ್ಲಿಯೇ ಎರಡು ಸಾವಿರ ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿವೆ. ಶೇ.10-20ರಷ್ಟು ಹೋಟೆಲ್ ಪರ್ಮೆನೆಂಟ್ ಬಂದ್ ಆಗಲಿವೆ. ಇನ್ನು ಶೇ.20ರಷ್ಟು ಹೋಟೆಲ್‌ ಸದ್ಯ ತಾತ್ಕಾಲಿಕ ಬಂದ್ ಆಗಿವೆ. ಉಳಿದ ಶೇ.60 ಹೋಟೆಲ್ ತೆರೆದರೂ ನಿರೀಕ್ಷಿತ ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಹೋಟೆಲ್ ಫಾರ್ ಸೇಲ್ ವಿತ್ ಫರ್ನೇಚರ್ ಎಂಬ ಬೋರ್ಡ್ ಬೆಂಗಳೂರಿನ ಹಲವೆಡೆ ಹೋಟೆಲ್ ಬಂದ್ ಮಾಡಿ ಮಾಲಿಕರು ನೇತು ಹಾಕಿದ್ದಾರೆ.

ಮಹಾನಗರಿಯಲ್ಲಿ ಎರಡು ಸಾವಿರ ಹೋಟೆಲ್ ಬಂದ್ ಪರಿಣಾಮ ಏನಿಲ್ಲವೆಂದರೂ ಒಂದು ಲಕ್ಷಕ್ಕು ಹೆಚ್ಚು ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ‌ ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ವಿ ಸಿ ರಾವ್ ಹೇಳುತ್ತಾರೆ.

ಬೆಂಗಳೂರಿನ ಬಿಟಿಎಂ 2ನೇ ಸ್ಟೇಜ್‌ ನಲ್ಲಿದ್ದ ಶಗುನ್ ಸ್ವೀಟ್ಸ್ ಅಂಡ್‌ ಫುಡ್ ಕಳೆದೊಂದು ದಶಕದಿಂದ ಚೆನ್ನಾಗಿ ನಡೆಯುತ್ತಿತ್ತು. ಇದರ ಮಾಲಿಕ ಪ್ರಕಾಶ್ ಪ್ರತಿ ತಿಂಗಳು 20 ಲಕ್ಷ ವ್ಯಾಪಾರ ಮಾಡುತ್ತಿದ್ದರು. ಆದರೀಗ ಕಳೆದೊಂದು ತಿಂಗಳಿನಿಂದ ಪಾರ್ಸೆಲ್ ಹಾಗೂ ಸಿಟ್ಟಿಂಗ್ ಸೇವೆ ನೀಡಿದರೂ ಎರಡು ಲಕ್ಷದಷ್ಟು ವ್ಯಾಪಾರವಾಗುತ್ತಿಲ್ಲ. ಇದರಿಂದ ಕಳೆದೆರಡು ತಿಂಗಳ‌ ಬಾಡಿಗೆ, ಕಾರ್ಮಿಕರ ವೇತನ, ಖರ್ಚು ಎಲ್ಲವನ್ನು ಸರಿದೂಗಿಸುವುದು ಕಷ್ಟವಾಗಿದೆ.‌

ಇದರ ಹಿನ್ನೆಲೆಯಲ್ಲಿ ತಾವು ನಡೆಸುತ್ತಿದ್ದ ಶಗುನ್ ಸ್ವೀಟ್ಸ್ ಮಾರಲು ಮುಂದಾಗಿದ್ದಾರೆ‌. ಬಾಡಿಗೆ ಕಟ್ಟಲು‌ ದುಡ್ಡಿರದ ಪರಿಸ್ಥಿತಿಯಲ್ಲಿ ನಾನು ಹೇಗೆ ರಸ್ಟೋರೆಂಟ್ ರನ್ ಮಾಡಲಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ‌.

ಅನ್ ಲಾಕ್ ಆದ್ರೂ ಜನರು ಹೊರಗೆ ಬರುತ್ತಿಲ್ಲ. ಅದರಲ್ಲೂ ರೆಸ್ಟೋರೆಂಟ್ ತೆರೆದರೂ ಜನರು ಬರೋರು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿವೆ ರೆಸ್ಟೋರೆಂಟ್. ಸಂಜೆ, ರಾತ್ರಿ ವೇಳೆಯಲ್ಲೂ ರೆಸ್ಟೋರೆಂಟ್​ಗೆ ಕುಟುಂಬ ಸಮೇತ ಜನರು ಆಗಮಿಸುತ್ತಿಲ್ಲ. ಕಳೆದೊಂದು ವಾರದಲ್ಲಿ ಶೇ.20ರಷ್ಟು ಮಾತ್ರ ಬ್ಯುಸಿನೆಸ್ ಆಗಿಲ್ಲ. ಪಾರ್ಸೆಲ್‌ ಜೊತೆಗೆ ಸಿಟ್ಟಿಂಗ್ ಸೇವೆಯಿದ್ರೂ ಜನರು ಬರುತ್ತಿಲ್ಲ. ರೆಸ್ಟೋರೆಂಟ್ ಗಳಲ್ಲಿ ಎಸಿ ಬಳಕೆ ನಿಷೇಧ ಮಾಡಲಾಗಿದೆ.

ಕೊರೊನೋ ಮುಂಜಾಗ್ರತಾ ಕ್ರಮ ಚಾಚೂ ತಪ್ಪದೆ ಪಾಲನೆಯಾದ್ರೂ ಕೊರೊನೋ ಭಯಕ್ಕೆ ಇನ್ನೂ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬ ಸಮೇತ ಆಗಮಿಸುವವರ ಸಂಖ್ಯೆ ವಿರಳವಾಗಿದೆ. ರೆಸ್ಟೋರೆಂಟ್ ಸಿಬ್ಬಂದಿಯೂ ಶೇ.70ರಷ್ಟು ಕಡಿಮೆಯಾಗಿದೆ. ಬೇರೆ ರಾಜ್ಯಗಳಿಂದ ಬಂದಿದ್ದ ಸಿಬ್ಬಂದಿ ವಾಪಾಸ್ ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರು ಕಡಿಮೆ, ವ್ಯಾಪಾರವೂ ಕಡಿಮೆ, ಸಿಬ್ಬಂದಿಯೂ ಕಡಿಮೆ ಆಗಿದೆ ಎಂದು ಸನ್ಮಾನ್ ರೆಸ್ಟೋರೆಂಟ್ ನ ರಾಮಕೃಷ್ಣ ಪರಿಸ್ಥಿತಿಯನ್ನು ವಿವರಿಸುತ್ತಾರೆ‌.

Comments are closed.