ಕರ್ನಾಟಕ

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ 4 ಅಭ್ಯರ್ಥಿಗಳ ಪೈಕಿ ಯಾರ ಬಳಿ ಎಷ್ಟೆಷ್ಟು ಅಸ್ತಿ ಇದೆ ನೋಡಿ…

Pinterest LinkedIn Tumblr

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ನಾಲ್ಕು ಅಭ್ಯರ್ಥಿಗಳು ತಮ್ಮ ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ, ನಾಲ್ವರು ಅಭ್ಯರ್ಥಿಗಳಿಗಿಂತ ಅವರ ಪತ್ನಿಯರೇ ಹೆಚ್ಚಿನ ಶ್ರೀಮಂತರಾಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗಿಂತ ಚನ್ನಮ್ಮ ಶ್ರೀಮಂತರು, ಎಚ್‌.ಡಿ.ದೇವೇಗೌಡರು ತಮ್ಮ ಪತ್ನಿಗಿಂತ ಕಡಿಮೆ ಆದಾಯ ಹೊಂದಿದ್ದಾರೆ. ಓಡಾಟಕ್ಕೆ ಮೂರು ಹಳೇ ಅಂಬಾಸಿಡರ್‌ ಕಾರು, ಕೃಷಿಗಾಗಿ ಎರಡು ಟ್ರ್ಯಾಕ್ಟರ್‌ಗಳನ್ನು ಹೊಂದಿದ್ದಾರೆ. ದೇವೇಗೌಡರ ವಾರ್ಷಿಕ ಆದಾಯ 10.25 ಲಕ್ಷ ರು, ಚನ್ನಮ್ಮ ಅವರ ಆದಾಯ 28.17 ಲಕ್ಷ ರು . ಚನ್ನಮ್ಮ ಅವರಿಗೆ
ಕೃಷಿ ಮೂಲದಿಂದ 1,38,360 ರು ಆದಾಯ ಬರುತ್ತದೆ. ದೇವೇಗೌಡರು 37.63 ಲಕ್ಷ, ಚನ್ನಮ್ಮ 80.29 ಲಕ್ಷ ನಗದು ಇಟ್ಟುಕೊಂಡಿದ್ದಾರೆ. ಅಲ್ಲದೆ, 26.92 ಲಕ್ಷ ಷೇರುಗಳು ಮತ್ತು ಬಾಂಡ್‌ಗಳನ್ನು ಹೊಂದಿದ್ದಾರೆ. ಚನ್ನಮ್ಮ 97.98 ಲಕ್ಷ ಸಾಲ ಮಾಡಿದ್ದಾರೆ. ದೇವೇಗೌಡರ ಆಸ್ತಿ ಮೌಲ್ಯ 2019 ರಲ್ಲಿ 67.56 ಲಕ್ಷ ಇದ್ದದ್ದು, 72.6 ಲಕ್ಷಕ್ಕೆ ಏರಿಕೆ ಆಗಿದೆ.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಅವರ ಪತ್ನಿ ರಾಧಾ ಭಾಯಿ ಅವರೇ ಹೆಚ್ಚು ಸಿರಿವಂತರಾಗಿದ್ದಾರೆ. ಖರ್ಗೆ ಕುಟುಂಬದ ಒಟ್ಟು ಆಸ್ತಿ ಮೌಲ್ಯ 15 ಕೋಟಿ ರೂ.ಗಳಿಗಿಂತ ಅಧಿಕವಾಗಿದೆ. ಖರ್ಗೆ ಅವರ ಸ್ವಂತ ಹೆಸರಿನಲ್ಲಿ 7,01,18,724 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಪತ್ನಿ ರಾಧಾ ಭಾಯಿ ಹೆಸರಿನಲ್ಲಿ 8,47,56,545 ರೂ. ಮೌಲ್ಯದ ಹಾಗೂ ಅವಿಭಕ್ತ ಕುಟುಂಬದ ಸದಸ್ಯರಾಗಿ ಖರ್ಗೆ ಅವರು 83.95 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಖರ್ಗೆ ತಮ್ಮ ಮತ್ತು ಪತ್ನಿಯ ಆಸ್ತಿ ವಿವರ ಘೋಷಿಸಿದ್ದಾರೆ.

ಖರ್ಗೆ ಅವರ ಬಳಿ ನಗದು ಸೇರಿ ನಾನಾ ಉಳಿತಾಯ ಖಾತೆ, ಠೇವಣಿ, ಬಾಂಡ್‌ನಲ್ಲಿಒಟ್ಟು 2,82,20,805 ರೂ. ಇದ್ದು, 10.71 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಜತೆಗೆ, ಇವರಿಗೆ 10 ಲಕ್ಷ ರೂ. ಸಾಲವಿದೆ. ಇನ್ನು ರಾಧಾ ಭಾಯಿ ಅವರ ಬಳಿ 81,29,618 ರೂ. ಹಣವಿದ್ದು, 33.81 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಇನ್ನು ಇವರು ವಾಣಿಜ್ಯ ಆಸ್ತಿ ಬಾಡಿಗೆ ಮುಂಗಡ ಸೇರಿ ಒಟ್ಟು 13.75 ಲಕ್ಷ ರೂ. ಸಾಲ ಹೊಂದಿದ್ದಾರೆ.

ರಾಜ್ಯಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಶೋಕ ಗಸ್ತಿ ಸ್ಥಿತಿವಂತರಲ್ಲ. ನಾಲ್ವರು ಅಭ್ಯರ್ಥಿಗಳ ಪೈಕಿ ಕನಿಷ್ಠ ಆಸ್ತಿ ಹೊಂದಿದವರಾಗಿದ್ದಾರೆ. ಕುಟುಂಬದ ಒಟ್ಟು ಘೋಷಿತ ಆಸ್ತಿ 19.3 ಲಕ್ಷ. ಗಸ್ತಿಗಿಂತ ಅವರ ಪತ್ನಿ ಸುಮಾ ಗಸ್ತಿ ಸ್ಥಿತಿವಂತೆ. ಅಶೋಕ್ ಬಳಿ ಎರಡು ಹಳೆಯ ಬಜಾಜ್ ಸ್ಕೂಟರ್‌ ಮತ್ತು ತುಂಡು ಭೂಮಿ ಇದೆ.

ಸುಮಾ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೊತ್ತ 12.45 ಲಕ್ಷ. ಅಶೋಕ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟು ಮೊತ್ತ 2.45 ಲಕ್ಷ. ನಗದು 1.50 ಲಕ್ಷ ಎಂದು ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ತಮ್ಮ ಹೆಸರಲ್ಲಿ 6,273, ಪತ್ನಿ ಹೆಸರಲ್ಲಿ 8,006. ಎಲ್‌ಐಸಿ ಪಾಲಿಸಿ ಮೊತ್ತ 3 ಲಕ್ಷ. ಸ್ವಂತಕ್ಕೆ ಚಿನ್ನಾಭರಣ ಹೊಂದಿಲ್ಲ. 8 ಲಕ್ಷ ಮೌಲ್ಯದ ಸಣ್ಣ ಭೂಮಿ ಹೊಂದಿದ್ದಾರೆ.

ಈರಣ್ಣ ಕಡಾಡಿ: ಈರಣ್ಣ 2.35 ಕೋಟಿ ಒಡೆಯ. 2 ಲಕ್ಷ ನಗದು, ಪೆಟ್ರೋಲ್‌‌ ಬಂಕ್‌ ಹೊಂದಿದ್ದಾರೆ. ಟೊಯೊಟಾ ಕಾರು, ವಿವಿಧ ಬ್ಯಾಂಕ್‌ಗಳಲ್ಲಿ 25.91 ಲಕ್ಷ ಠೇವಣಿ, 60 ಗ್ರಾಂನಷ್ಟು ಚಿನ್ನಾಭರಣ ಇದೆ. ದಂಪತಿ ಹೆಸರಲ್ಲಿ 8.23 ಎಕರೆ ಜಮೀನು, ಮಕ್ಕಳ ಹೆಸರಲ್ಲಿ 8.4 ಎಕರೆ ಜಮೀನು ಇದೆ.

Comments are closed.