ಬೆಂಗಳೂರು (ಜೂ. 5): ತೆರವಾಗಿರುವ ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯುಸಿಯಾಗಿವೆ. ಇಂದು ಕಾಂಗ್ರೆಸ್ ತನ್ನ ರಾಜ್ಯಸಭಾ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಘೋಷಿಸಿದೆ. ಜೆಡಿಎಸ್ನಲ್ಲೂ ಇಂದು ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ದೇವೇಗೌಡರನ್ನೇ ರಾಜ್ಯಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯಸಭೆಗೆ ಸ್ಪರ್ಧಿಸಲು ದೇವೇಗೌಡರು ಇನ್ನೂ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದಾರೆ.
ರಾಜ್ಯಸಭೆಗೆ ದೇವೇಗೌಡರೇ ನಿಲ್ಲಬೇಕು ಅಂತ ಪಕ್ಷದದ ಎಲ್ಲಾ ಶಾಸಕ ಒತ್ತಾಯ ಮಾಡಿದ್ದಾರೆ. ಆದರೆ, ದೇವೇಗೌಡರು ರಾಜಸಭೆಗೆ ನಿಲ್ಲುವ ಬಗ್ಗೆ ಇದುವರೆಗೂ ಒಪ್ಪಿಗೆ ಕೊಟ್ಟಿಲ್ಲ. ಜೆಡಿಎಸ್ನ ಎಲ್ಲ ಶಾಸಕರೂ ದೇವೇಗೌಡರ ಸ್ಪರ್ಧೆಗೆ ಒತ್ತಾಯಿಸಿದ್ದಾರೆ. ಅವರ ದುಡಿಮೆ ಹಾಗೂ ದೇಶದ ಪರಿಸ್ಥಿತಿಯಿಂದ ರಾಜ್ಯಸಭೆಗೆ ಅವರ ಅವಶ್ಯಕತೆ ಇದೆ. ದೇವೇಗೌಡರು ಅನುಭವಿ ರಾಜಕಾರಣಿ. ಅವರು ದೆಹಲಿಗೆ ಹೋಗಬೇಕೆಂಬುದು ಶಾಸಕರ ಒತ್ತಾಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿರುವ ಅವರು, ಕಾಂಗ್ರೆಸ್ನಿಂದ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು. ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. 3ನೇ ಅಭ್ಯರ್ಥಿಯನ್ನು ಕಣಕ್ಕಿ ಇಳಿಸಲು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯೆಯ ಕೊರತೆ ಇದೆ. ಎರಡೂ ಪಕ್ಷವನ್ನ ನೋಡಿದಾಗ ನಮಲ್ಲಿ ಸಂಖ್ಯೆ ಬಲ ಜಾಸ್ತಿ ಇದೆ. ಕಾಂಗ್ರೆಸ್, ಬಿಜೆಪಿಯಲ್ಲೂ ಅಭ್ಯರ್ಥಿಯನ್ನು ಹಾಕಿದಾಗ ನಾವು ಯೋಚನೆ ಮಾಡುತ್ತೇವೆ. ಇದುವರೆಗೂ ನಮ್ಮನ್ನು ಯಾವ ಕಾಂಗ್ರೆಸ್ ನಾಯಕರೂ ಸಂಪರ್ಕ ಮಾಡಿಲ್ಲ. ಆದರೆ, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಾನು ಈ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ? ನಾನು ಮುಖ್ಯಮಂತ್ರಿ ಹುದ್ದೆಯನ್ನು ಅತ್ಯಂತ ಸಂತೋಷದಿಂದ ಬಿಟ್ಟು ಬಂದಿದ್ದೇನೆ. ಬಿಜೆಪಿ ಸರ್ಕಾರವನ್ನು ಉರುಳಿಸಬೇಕು ಎಂದು ನಾನು ಯಾವ ಆಸಕ್ತಿಯನ್ನೂ ಇಟ್ಟುಕೊಂಡಿಲ್ಲ. ಸರ್ಕಾರದ ಲೋಪವನ್ನು ಬದಲಾಯಿಸಿಕೊಳ್ಳಿ ಅಂತ ಸಲಹೆ ನೀಡಿದ್ದೆ. ನನಗೆ ಆ ಸರ್ಕಾರದ ಬಗ್ಗೆ ಆಸಕ್ತಿ ಇಲ್ಲ ಎನ್ನುವಾಗ ಆ ಸರ್ಕಾರದ ಬಗ್ಗೆ ನಾನು ಯಾಕೆ ಯೋಚನೆ ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ಸಮಾಜಘಾತುಕ ಶಕ್ತಿಗಳಿಂದ ನಮ್ಮ ಸರ್ಕಾರ ಉರುಳಿತು. ಮಂತ್ರಿಯಾಗಬೇಕು ಎಂದು ನಮ್ಮ ಸರ್ಕಾರವನ್ನು ಉರುಳಿಸಿದರು. ಈಗ ಎಲ್ಲವನ್ನೂ ನಾನು ನೋಡುತ್ತಿದ್ದೇನೆ. ಅದೇ ಸಮಾಜಘಾತುಕ ಶಕ್ತಿಗಳು ಬಿಜೆಪಿ ಸರ್ಕಾರವನ್ನು ತೆಗೆಯಲು ಹೊರಟಿರುವ ಬಗ್ಗೆ ನೀವೇ ಹೇಳುತ್ತಿದ್ದೀರಿ. ಈ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಜೂನ್ 25ಕ್ಕೆ ಕರ್ನಾಟಕದ ಪ್ರಭಾಕರ್ ಕೋರೆ, ರಾಜೀವ್ ಗೌಡ, ಬಿ.ಕೆ. ಹರಿಪ್ರಸಾದ್, ಕುಪೇಂದ್ರ ರೆಡ್ಡಿ ಅವರ ರಾಜ್ಯಸಭೆ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಈ 4 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಜೂನ್ 9ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಜೂನ್ 10ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಯಿಂದ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ.
Comments are closed.