ಕರ್ನಾಟಕ

ಕೊರೊನಾ ಕಾಲದಲ್ಲೇ ಶಾಲೆ ಆರಂಭ: ಶಾಲೆಯ ಮಾನ್ಯತೆ ರದ್ದುಗೊಳಿಸಿದ ಡಿಡಿಪಿಐ

Pinterest LinkedIn Tumblr


ವಿಜಯಪುರ: ಕೊರೊನಾ ವೈರಸ್ ಆರ್ಭಟ ಇನ್ನೂ ಮುಗಿದೇ ಇಲ್ಲ. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳೋದು ಬೇಡ ಎಂದು ಶಿಕ್ಷಣ ಸಚಿವರೇ ಸುಮ್ಮನಿದ್ದಾರೆ. ಆದ್ರೆ, ವಿಜಯಪುರದಲ್ಲಿ ಸರಕಾರದ ಆದೇಶ ಧಿಕ್ಕರಿಸಿ, ಖಾಸಗಿ ಶಾಲೆಯೊಂದು ಮಕ್ಕಳಿಗೆ ಪಾಠ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪ್ರಸನ್ನಕುಮಾರ್, ಖಾಸಗಿ ಶಾಲೆಯ ಮಾನ್ಯತೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ರಹಿಂ ನಗರದಲ್ಲಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದವರು. ಶಾಲೆಯ ಆಡಳಿತ ಮಂಡಳಿಯ ಈ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ, ಶಾಲೆಯ ಮಾನ್ಯತೆ ರದ್ದುಗೊಳಿಸಿದ್ದಾಗಿ ಡಿಡಿಪಿಐ ಸಿ. ಪ್ರಸನ್ನಕುಮಾರ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಸರಕಾರ ಶಿಕ್ಷಣ ತಜ್ಞರೊಂದಿಗೆ ಗಂಭೀರ ಚಿಂತನೆ ನಡೆಸಿದೆ. ಆದರೆ ಈ ಶಾಲೆಯ ಆಡಳಿತ ಮಂಡಳಿ ಇದನ್ನು ಕಿಂಚಿತ್ ಗಣನೆಗೆ ತೆಗೆದುಕೊಳ್ಳದೇ ಮಕ್ಕಳನ್ನು ಶಾಲೆಯಲ್ಲಿ ಸೇರಿಸಿ, ಪಾಠ ಆರಂಭಿಸಿದೆ. ಮಾತ್ರವಲ್ಲ, ಶಾಲೆಯ ಆಡಳಿತ ಮಂಡಳಿ ಧನದಾಹಕ್ಕೆ ಒಳಗಾಗಿ, ಮಕ್ಕಳ ಪೋಷಕರಿಂದ ಶುಲ್ಕ ವಸೂಲಿ ಮಾಡಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಈ ಕುರಿತು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ವಿಡಿಯೋದಲ್ಲಿ ಪೋಷಕರೇ ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿರುವ ದೃಶ್ಯಗಳಿದ್ದು, ಮಕ್ಕಳಿಗೆ ಪಾಠ ಮಾಡುವ ದೃಶ್ಯಗಳು ಸೆರೆಯಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ನದಾಫ್ ಶಾಲೆಗೆ ಖುದ್ದು ಭೇಟಿ ನೀಡಿ, ಶಿಕ್ಷಕರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಶಾಲೆಯ ದಾಖಲಾತಿ ಪರಿಶೀಲಿಸಿದ್ದಾರೆ. ಆದರೆ ಪೋಷಕರು ಶುಲ್ಕ ಪಾವತಿಸಿದ ಪಾವತಿ ಲಭ್ಯವಾಗಿಲ್ಲ. ಎರಡು ಕೊಠಡಿಗಳಿಗೆ ಬೀಗ ಹಾಕಿತ್ತು. ಮಕ್ಕಳೂ ಇರಲಿಲ್ಲ ಎಂದು ಬಿಇಒ ತಿಳಿಸಿದರು.

ಕ್ರಮಕ್ಕೆ ಒತ್ತಾಯ: ಕಳೆದ 10 ದಿನಗಳಿಂದ ಈ ಶಾಲೆ ಆರಂಭವಾಗಿದೆ. ಮಕ್ಕಳಿಗೆ ಸುರಕ್ಷಿತಾ ಕ್ರಮ ಕೈಗೊಳ್ಳದೆ, ಮಕ್ಕಳ ಜೀವದ ಜೊತೆಗೆ ಚೆಲ್ಲಾವಾಡುತ್ತಿದ್ದಾರೆ. ಈ ಶಾಲೆಯೂ ಅನಧಿಕೃತ ಎಂದು 2019ರಲ್ಲೇ ದೂರು ನೀಡಿದ್ದೇವೆ. ಆದರೆ ಯಾರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಈ ಶಾಲೆಯ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ಮುಖಂಡ ಸಂತೋಷ ಚೌಧರಿ ಒತ್ತಾಯಿಸಿದ್ದಾರೆ.

ಶಾಲೆ ಆರಂಭಿಸಿದ್ದು, ಮಕ್ಕಳಿಗೆ ಪಾಠ ಹೇಳಿದ್ದು ನಿಜ. ಹೀಗಾಗಿ ತಕ್ಷಣವೇ ಆ ಶಾಲೆಯ ಮಾನ್ಯತೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದೇನೆ. ಪೋಷಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ವಿಜಯಪುರ ಡಿಡಿಪಿಐ ಸಿ. ಪ್ರಸನ್ನಕುಮಾರ್ ತಿಳಿಸಿದ್ದಾರೆ.

Comments are closed.