ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ಮುಂಜಾಗ್ರತಾ ಕ್ರಮ – ಸುರೇಶ್‌ ಕುಮಾರ್‌ ಭರವಸೆ

Pinterest LinkedIn Tumblr


ಕೋಲಾರ: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ 8 ಲಕ್ಷ 48 ಸಾವಿರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದಾರೆ. ಲಾಕ್‌ಡೌನ್ ಸಮಸ್ಯೆಯಿಂದ ಪರೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಜೂನ್ 25 ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಸಲಾಗುವುದು. 18 ರಿಂದ 24 ಜನ ವಿದ್ಯಾರ್ಥಿಗಳು ಮಾತ್ರ ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗುವುದು. ರೆಡ್ ಕ್ರಾಸ್ ಹಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಇವುಗಳನ್ನು ವಿತರಣೆ ಮಾಡಲಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುವುದು,” ಎಂದು ತಿಳಿಸಿದರು.

ಪೋಷಕರಲ್ಲಿ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ, ಬಸ್ ವ್ಯವಸ್ಥೆ ಮಾಡುವ ಭರವಸೆಯನ್ನೂ ಸುರೇಶ್‌ ಕುಮಾರ್‌ ನೀಡಿದರು. ಹೈಕೋರ್ಟ್‌ಗೆ ಸಹ ಪರೀಕ್ಷೆ ಸುಸೂತ್ರವಾಗಿ ನಡೆಸುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇವೆ ಎಂದು ವಿವರಿಸಿದರು.

ವಲಸೆ ಕಾರ್ಮಿಕರ ಮಕ್ಕಳಿಗೆ ಅವರಿರುವ ಸ್ಥಳದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕಂಟೈನ್‌ಮೆಂಟ್ ಝೋನ್‌ ಪ್ರದೇಶದಲ್ಲಿರುವ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೂ ಖುದ್ದಾಗಿ ಭೇಟಿ ನೀಡಿ ಪರೀಕ್ಷೆ ಸಿದ್ದತೆಗಳ‌ ಕುರಿತು ಅಧಿಕಾರಿಗಳ ಜೊತೆ ನಡೆಸಲಿದ್ದೇನೆ. ಈಗಾಗಲೇ ಚಂದನ ಟಿವಿಯಲ್ಲಿ ಪುನರ್ ಮನನ ತರಗತಿಗಳು ಪ್ರಾರಂಭವಾಗಿವೆ. ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಶಾಲೆ ಕಾಲೇಜುಗಳ ಪ್ರಾರಂಭದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರದ ಹೊಸ ನಿರ್ದೇಶನ ಬಂದರೆ ದೇವಸ್ಥಾನ, ಮಾಲ್, ಎಲ್ಲವೂ ಪ್ರಾರಂಭವಾಗಲಿದೆ. ಕೊರೊನಾ ಹೇಳಿ ಕೇಳಿ ಬಂದಿಲ್ಲ, ಮಾರ್ಚ್‌ಲ್ಲಿ ನಮ್ಮ ದೇಶದಲ್ಲಿ ಕಾಣಿಸಿಕೊಂಡಿದೆ. ಮಾಸ್ಕ್, ಸಾಮಾಜಿಕ‌ ಅಂತರ, ಗುಂಪು ಸೇರದೆ ಇರುವುದೇ ಇದಕ್ಕೆ ಔಷಧಿ. ಎಚ್‌ಐವಿ, ಚಿಕನ್ ಗುನ್ಯಾ, ಎಚ್1ಎನ್1 ಜೊತೆ ಬೆರೆತ ಹಾಗೆ ಕೊರೊನಾ ಜೊತೆಯೂ ಬದುಕು ಸಹ ಸಾಧ್ಯ ಎಂದು ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

Comments are closed.