
ಚಾಮರಾಜನಗರ; ಮದುವೆಯಲ್ಲಿ ಭಾಗವಹಿಸಿರಲೇ ಇಲ್ಲ ಎಂದು ಹೇಳಲಾಗಿದ್ದ ಮಂಡ್ಯದ ಕೊರೋನಾ ಸೋಂಕಿತ ಅಧಿಕಾರಿ ಮದುವೆ ಮನೆಯಲ್ಲಿ ಊಟ ಮಾಡಿರುವುದು ಖಚಿತವಾಗಿದ್ದು, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅವರ ಜೊತೆ ಕುಳಿತು ಊಟ ಮಾಡಿದ ಚಾಮರಾಜನಗರದ ಸೋಮವಾರಪೇಟೆಯ ಇಬ್ಬರನ್ನುಇದೀಗ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಅಧಿಕಾರಿ ನಂಜನಗೂಡು ತಾಲೂಕು ಹೆಳವರಹುಂಡಿಯಲ್ಲಿ ಮದುವೆ ಮನೆಯಲ್ಲಿ ತಮ್ಮ ಜೊತೆ ಕುಳಿತು ಊಟ ಮಾಡಿರುವುದನ್ನು ಸ್ವತಃ ಸೋಮವಾರಪೇಟೆ ಗ್ರಾಮಸ್ಥರೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಡಿಎಚ್ಒ ಡಾ.ಎಂ.ಸಿ ರವಿ ಅವರನ್ನು ಇಂದು ಖುದ್ದು ಭೇಟಿ ಮಾಡಿದ ಸೋಮವಾರಪೇಟೆ ಗ್ರಾಮಸ್ಥರು ಸೋಂಕಿತ ಅಧಿಕಾರಿ ಮದುವೆ ಮನೆಗೆ ಬಂದು ಊಟ ಮಾಡಿರುವ ಫೋಟೋ ನೀಡಿದ್ದಾರೆ. ಸೋಂಕಿತ ಅಧಿಕಾರಿ ಊಟಕ್ಕೆ ಕುಳಿತಿರುವ ಸಾಲಿನಲ್ಲೇ ಸೋಮವಾರಪೇಟೆಯ ಇಬ್ಬರು ನಿವಾಸಿಗಳು ಕುಳಿತಿರುವುದನ್ನು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಸೋಮವಾರಪೇಟೆಗೆ ಧಾವಿಸಿದ ಆರೋಗ್ಯ ಅಧಿಕಾರಿಗಳು ಆ ಇಬ್ಬರನ್ನು ಕ್ವಾರಂಟೈನ್ ಮಾಡಿದ್ದಾರೆ.
ಹುಷಾರಿಲ್ಲದ ತನ್ನ ಅಜ್ಜಿಯನ್ನು ನೋಡಲು ಸೋಂಕಿತ ಅಧಿಕಾರಿ ಹೆಳವರ ಹುಂಡಿಗೆ ಹೋಗಿದ್ದರು. ಅಜ್ಜಿಯ ಮನೆಯ ಪಕ್ಕದಲ್ಲೇ ಮದುವೆ ನಡೆಯುತ್ತಿದ್ದರಿಂದ ಅಲ್ಲಿಗೆ ಹೋಗಿ ಊಟ ಮಾಡಿದ್ದಾರೆ. ಅಷ್ಟೇ ಹೊರತು ವಧು-ವರರನ್ನು ಭೇಟಿ ಮಾಡಿಲ್ಲ ಎಂದು ಡಿಎಚ್ಒ ತಿಳಿಸಿದ್ದಾರೆ. ತಾನು ವಧು-ವರರ ಬಳಿ ಹೋಗಿಲ್ಲ ಎಂದು ಸಿಡಿಪಿಓ ಮಾಹಿತಿ ನೀಡಿರುವುದಾಗಿ ಡಿಎಚ್ಒ ಹೇಳಿದ್ದಾರೆ.
ಬುಧವಾರ ನಂಜನಗೂಡು ತಾಲೂಕಿನ ಹೆಳವರಹುಂಡಿಯಲ್ಲಿ ಮದುವೆ ನಡೆದಿತ್ತು. ವಧು ಚಾಮರಾಜನಗರದ ಸೋಮವಾರಪೇಟೆ ನಿವಾಸಿ. ಈ ಹಿನ್ನೆಲೆಯಲ್ಲಿ ಈ ಮದುವೆಯಲ್ಲಿ ಚಾಮರಾಜನಗರದ ಸೋಮವಾರಪೇಟೆಯ 40ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಮದುವೆ ಮನೆಗೆ ಸೋಂಕಿತ ಅಧಿಕಾರಿಯು ಬಂದಿದ್ದರು ಎಂಬುದನ್ನು ತಿಳಿದು ಸೋಮವಾರಪೇಟೆ ನಿವಾಸಿಗಳು ಆತಂಕಗೊಂಡಿದ್ದರು.
ಸೋಂಕಿತ ಅಧಿಕಾರಿ ನೀಡಿರುವ ಮಾಹಿತಿ ಆಧರಿಸಿ, ಆ ಅಧಿಕಾರಿ ಮದುವೆಗೆ ಹೋಗಿರಲಿಲ್ಲ ಎಂದು ನಿನ್ನೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟನೆ ನೀಡಿದ್ದರು. ಇದರಿಂದಾಗಿ ಸೋಮವಾರಪೇಟೆ ಗ್ರಾಮಸ್ಥರು ಸ್ವಲ್ಪ ನಿರಾಳವಾಗಿದ್ದರು. ಆದರೆ ಮದುವೆ ಮನೆಯಲ್ಲಿ ಇತರರ ಜೊತೆ ಕುಳಿತು ಊಟ ಮಾಡಿರುವುದನ್ನು ಸೋಂಕಿತ ಅಧಿಕಾರಿ ಮುಚ್ಚಿಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.
ಆತ ಮದುವೆ ಮನೆಯಲ್ಲಿ ಊಟ ಮಾಡುವ ಫೋಟೋವನ್ನು ಸೋಮವಾರಪೇಟೆ ಗ್ರಾಮಸ್ಥರೇ ಬಹಿರಂಗಪಡಿಸಿದ್ದಾರೆ. ಕೊರೋನಾ ಸೋಂಕಿತ ಮದುವೆ ಮನೆಗೆ ಬಂದು ಊಟ ಮಾಡಿರುವುದು ಗೊತ್ತಾಗುತ್ತಿದ್ದಂತೆ ಮತ್ತೆ ಸೋಮವಾರಪೇಟೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಊಟ ಮಾಡಿರುವ ವಿಷಯನ್ನೆ ಮುಚ್ಚಿಟ್ಟಿದ್ದ ಅಧಿಕಾರಿ ವಧು-ವರರನ್ನು ಭೇಟಿ ಮಾಡಿರುವುದನ್ನು ಮುಚ್ಚಿಟ್ಟಿರಬಹುದು. ಆತನ ಪ್ರಾಥಮಿಕ ಸಂಪರ್ಕಕ್ಕೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇನ್ನಷ್ಟು ಮಂದಿ ಬಂದಿರಬಹುದು. ಹಾಗಾಗಿ ಕುಲಂಕಷ ತನಿಖೆ ನಡೆಸಿ, ಆತನ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ಗೆ ಒಳಪಡಿಸಬೇಕು. ಅವರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೋಮವಾರಪೇಟೆಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.