
ಮಂಡ್ಯ: ಮಾರಕ ಕೊರೋನಾ ವೈರಸ್ ಸಕ್ಕರೆ ನಾಡು ಮಂಡ್ಯದಲ್ಲಿ ಅರ್ಧಶತಕ ಭಾರಿಸಿದ್ದು, ಗ್ರೀನ್ ಝೋನ್ ನಲ್ಲಿದ್ದ ಮದ್ದೂರಿಗೂ ಮಾರಕ ಸೋಂಕು ಪ್ರಸರಿಸಿರುವ ಆಂತಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮಟ್ಟಿಗೆ ಗ್ರೀನ್ ಜೋನ್‌ನಲ್ಲಿದ್ದ ಮದ್ದೂರು ತಾಲ್ಲೂಕಿನಲ್ಲಿ ಕೂಡ ಇಂದು ಪ್ರಪ್ರಥಮಭಾರಿಗೆ ಓರ್ವವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ ಅರ್ಧಶತಕದಷ್ಟು ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಪಿ ೧೦೫೭ ಸಂಖ್ಯೆ ೪೦ ವರ್ಷದ ವ್ಯಕ್ತಿಗೆ ಇಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ನಿನ್ನೆಯವರೆಗೂ ಮಂಡ್ಯ ಜಿಲ್ಲೆಯಲ್ಲಿ ೪೯ ಪ್ರಕರಣಗಳಿದ್ದು ಇವತ್ತಿನ ೧ ಪ್ರಕರಣ ಸೇರಿ ೫೦ ಪ್ರಕರಣಗಳನ್ನು ಕಂಡ ಜಿಲ್ಲೆಯೆಂಬ ಖ್ಯಾತಿಗೆ ಪಾತ್ರವಾಗಿದೆ.
ಪಿ.೧೦೫೭ ವ್ಯಕ್ತಿಯು ಮದ್ದೂರು ತಾಲ್ಲೂಕು ಕಡಿಲುವಾಗಿಲು ಗ್ರಾಮದವನಾಗಿದ್ದು, ಈತ ಕೋಲಾರ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಗ್ರಾಮದ ತನ್ನ ನಿವಾಸದಲ್ಲೇ ಇದ್ದನು ಎನ್ನಲಾಗಿದೆ. ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಚನ್ನಪಟ್ಟಣದಿಂದ ತನ್ನ ಸ್ನೇಹಿತ ಅಭಿಷೇಕ್‌ನೊಂದಿಗೆ ಕೋಲಾರಕ್ಕೆ ದ್ವಿಚಕ್ರವಾಹನದಲ್ಲಿ ಕಳೆದ ೫ ದಿನಗಳ ಹಿಂದೆ ತೆರಳಿದ್ದು ಆತನನ್ನು ನ್ಯಾಯಾಲಯದ ಆವರಣದಲ್ಲಿ ಕೊರೋನಾ ತಪಾಸಣೆ ನಡೆಸಲಾಗಿತ್ತು. ಶುಕ್ರವಾರ ಬಂದ ವರದಿಯಲ್ಲಿ ಈತನಿಗೆ ಸೋಂಕು ದೃಢಪಟ್ಟಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಥಮ ಸಂಪರ್ಕದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ತಂದೆ ತಾಯಿ, ಪತ್ನಿ, ಸಹೋದರ, ಸಹೋದರಿ ಸೇರಿದಂತೆ ೭ ಮಂದಿಯನ್ನು ಮದ್ದೂರು ತಾಲ್ಲೂಕು ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಅಂತರಜಿಲ್ಲಾ ಪ್ರಯಾಣದಿಂದ ಮದ್ದೂರಿನ ವ್ಯಕ್ತಿಗೆ ಕೊರೊನಾ ಪತ್ತೆ
ಇದುವರೆಗೂ ಬಾಂಬೆ, ದೆಹಲಿಯ ತಬ್ಲಿಘಿ, ಮೈಸೂರಿನ ಜುಬಿಲಿಯಂಟ್ ಸಂಪರ್ಕದಿಂದ ಕೊರೋನಾ ಪಾಸಿಟಿವ್ ಬಂದಿದ್ದ ಬಗ್ಗೆ ಮಂಡ್ಯ ಜನರಲ್ಲಿ ಆತಂಕ ತಂದಿತ್ತು ಅದರೆ ಇದೀಗ ಅಂತರ ಜಿಲ್ಲಾ ಪ್ರಯಾಣ ಮಾಡಿದ್ದ ಮದ್ದೂರಿನ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಠಿಸಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಪತ್ತೆಯಾಗದ ಕೊರೋನಾ
ಇಲ್ಲಿಯವರೆಗೂ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಶ್ರೀರಂಗಪಟ್ಟಣ ಮತ್ತು ಮದ್ದೂರು ಮಾತ್ರ ಒಂದೂ ಪ್ರಕರಣಗಳಿಲ್ಲದೆ ಗ್ರೀನ್ ಝೋನ್‌ನಲ್ಲಿದ್ದವು, ಆದರೆ ಇಂದು ಮದ್ದೂರಿನಲ್ಲಿ ವ್ಯಕ್ತಿಯೋರ್ವನಿಗೆ ಕಾಣಿಸಿಕೊಂಡಿದ್ದು ಶ್ರೀರಂಗಪಟ್ಟಣ ತಾಲ್ಲೂಕು ಮಾತ್ರ ಇವತ್ತಿಗೂ ಗ್ರೀನ್ ಝೋನ್‌ನಲ್ಲಿಯೇ ಇದೆ.
ಭಾನುವಾರ ಮತ್ತಷ್ಟು ಪ್ರಕರಣ ಬಹಿರಂಗ ಸಾಧ್ಯತೆ;
ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಬರೋಬ್ಬರಿ ೧೩ ಪ್ರಕರಣಗಳು ಪತ್ತೆಯಾಗಿ ಇಡೀ ಮಂಡ್ಯಜಿಲ್ಲೆಯಲ್ಲಿ ಆತಂಕ ಸೃಷ್ಠಿಯಾಗಿದ್ದ ಬೆನ್ನಲ್ಲೇ ಶನಿವಾರವೂ ಕೂಡ ೧೩ ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂಬ ಸುದ್ದಿ ಹರಿದಾಡಿದ್ದು ಮತ್ತುಷ್ಟು ಆತಂಕ ಸೃಷ್ಠಿಯಾಗಿತ್ತು,ಆದರೆ ಬೆಳಗಿನ ವರದಿಯಲ್ಲಷ್ಟೇ ಒಂದೇ ಒಂದು ಪ್ರಕರಣ ಪತ್ತೆಯಾಗಿದೆ.ಜಿಲ್ಲಾಧಿಕಾರಿಗಳ ಕಛೇರಿಯ ಆಪ್ತಮೂಲಗಳ ಪ್ರಕಾರ ಶನಿವಾರ ಪ್ರಕಟವಾಗಬೇಕಿದ್ದ ೧೩ ಕ್ಕೂ ಹೆಚ್ಚು ಪ್ರಕರಣಗಳು ಭಾನುವಾರ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Comments are closed.