ಕರ್ನಾಟಕ

ಈ ಬಾರಿಯ ಮುಂಗಾರು ಪ್ರವೇಶದ ವಿವರ

Pinterest LinkedIn Tumblr


ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ದಿಢೀರನೆ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮದಿಂದ ಈ ಬಾರಿ ಮುಂಗಾರು ಕೊಂಚ ತಡವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಮುಂಗಾರು ಕೇರಳವನ್ನು ಜೂ.1 ರಂದು ಪ್ರವೇಶಿಸುತ್ತದೆ. ನಂತರ ಒಂದು ವಾರದೊಳಗೆ ರಾಜ್ಯಕ್ಕೆ ಆಗಮಿಸುತ್ತದೆ. ಈ ಬಾರಿ ಜೂ.5 ರಂದು ಕೇರಳ ಪ್ರವೇಶಿಸಲಿದೆ. ಈ ದಿನದಲ್ಲಿ 4 ದಿನ ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ವಾಯುಭಾರ ಕುಸಿತವಾಗಿದ್ದು, ಅದು ದುರ್ಬಲವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದು ಈಗ ಪ್ರಬಲವಾಗಿ ಚಂಡಮಾರುತವಾಗಿ ಪರಿವರ್ತನೆಯಾಗುತ್ತಿದೆ. ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿಮಳೆ ಸುರಿಯುತ್ತಿದೆ. ಜತೆಗೆ ಮುಂಗಾರು ಆಗಮನ ವಿಳಂಬವಾಗಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ಮಾತನಾಡಿ, ”ಚಂಡಮಾರುತದಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಅಂಡಮಾನ್‌ ಭಾಗದಲ್ಲಿ ಚಂಡಮಾರುತವು ವಾತಾವರಣದ ತೇವಾಂಶವನ್ನು ಹೀರಿಕೊಳ್ಳುತ್ತಿದೆ. ಮುಂಗಾರು ಪ್ರವೇಶಿಸಬೇಕೆಂದರೆ ತೇವಾಂಶವು ಮತ್ತೆ ಉಂಟಾಗಬೇಕಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಹೀಗಾಗಿ, ಮುಂಗಾರು ಆಗಮನ ವಾಡಿಕೆಗಿಂತ ಕೊಂಚ ತಡವಾಗಲಿದೆ,” ಎಂದು ತಿಳಿಸಿದರು.

ಕೇರಳದಲ್ಲಿ ಮುಂಗಾರು ಆರಂಭ ವಿಳಂಬ: ಐಎಂಡಿ

ಹವಮಾನ ಮುನ್ಸೂಚನೆ
ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ನಾಪೋಕ್ಲುವಿನಲ್ಲಿ 70 ಮಿ.ಮೀ., ಸುಬ್ರಹ್ಮಣ್ಯ, ಶಿಗ್ಗಾಂವದಲ್ಲಿ 50 ಮಿ.ಮೀ., ಯಡವಾಡದಲ್ಲಿ 40 ಮಿ.ಮೀ., ಗೇರುಸೊಪ್ಪ, ಹೊನ್ನಾವರ, ಸುಳ್ಯ, ಇಳಕಲ್‌, ನರಗುಂದ, ಸೊರಬ, ಕುಶಾಲನಗರದಲ್ಲಿ 30 ಮಿ.ಮೀ. ಮಳೆಯಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಕರಾವಳಿಯಲ್ಲಿ ಮೇ 17ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಂದಿನ ಮುಂಗಾರು ಪ್ರವೇಶ
2019: ಜೂ.8
2018: ಮೇ 29
2017: ಮೇ 30

Comments are closed.