ಕರ್ನಾಟಕ

ಹಸಿರು ವಲಯ ಚಿಕ್ಕಮಗಳೂರು ಜಿಲ್ಲೆಗೆ ಕಾದಿದೆಯಾ ಗಂಡಾಂತರ?

Pinterest LinkedIn Tumblr


ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ. ಆದರೆ ಈಗ ರೆಡ್, ಆರೇಂಜ್ ಜಿಲ್ಲೆಗಳಿಂದಲೂ ಜನರು ಜಿಲ್ಲೆಗೆ ಸುಲಭವಾಗಿ ಪ್ರವೇಶಿಸುತ್ತಿರುವುದು ಕಾಫಿನಾಡಿನ ಮಂದಿಯನ್ನು ಬೆಚ್ಚಿ ಬೀಳಿಸಿದೆ.

ಕಳೆದ ಮೇ 3ರವರೆಗೂ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲನೆಯಾಗಿತ್ತು. ಆದರೆ ಲಾಕ್​ಡೌನ್ ರಿಲ್ಯಾಕ್ಸ್ ಮಾಡಿದ್ದೇ ತಡ, ಜಿಲ್ಲೆಗೆ ಪ್ರತಿದಿನ ನೂರಾರು ವಾಹನಗಳು ಹೊರಗಿನಿಂದ ಪ್ರವೇಶಿಸುತ್ತಿವೆ. ಅದರಲ್ಲೂ ರೆಡ್, ಆರೆಂಜ್ ಜಿಲ್ಲೆಗಳಿಂದ ಸಾಲು ಸಾಲಾಗಿ ಬರ್ತಿರುವ ವಾಹನಗಳು ಕಾಫಿನಾಡ ಜನರಲ್ಲಿ ಭೀತಿ ಹುಟ್ಟಿಸಿದೆ. ಇಲ್ಲಿಯವರೆಗೂ ನೆಮ್ಮದಿಯಾಗಿದ್ದ ಜನರು, ಸದ್ಯ ಹೊರಗಡೆಯಿಂದ ಬರುತ್ತಿರುವ ವಾಹನಗಳನ್ನ ಕಂಡು ಆತಂಕಕ್ಕೀಡಾಗಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಹಲವೆಡೆಯಿಂದ ವಾಹನಗಳಲ್ಲಿ ಬರುತ್ತಿರುವ ಹಲವರು ಎಲ್ಲಿ ಯಡವಟ್ಟು ಮಾಡಿ ನಮಗೂ ಕೊರೋನಾ ಸೋಂಕು ಹತ್ತಿಸುತ್ತಾರೋ ಎಂಬ ಹೆದರಿಕೆ ಜನರಲ್ಲಿ ಮನೆ ಮಾಡಿದೆ.

ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗ ಕೊಟ್ಟಿಗೆಹಾರದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ದಾಂಗುಡಿ ಇಡುತ್ತಿವೆ. ಆನ್​ಲೈನ್ ಪಾಸ್ ಪ್ರಯೋಜನ ಪಡೆದುಕೊಂಡು ಪ್ರತಿನಿತ್ಯ ಕಾಫಿನಾಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದು ನಿಜಕ್ಕೂ ಭಯ ಹುಟ್ಟಿಸಿದೆ. ಹೀಗೆ ಬರುವವರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ ಅನ್ನೋದನ್ನು ಬಿಟ್ಟರೆ, ಅವರನ್ನು ತಡೆಯುವ ಅಧಿಕಾರ ಪೊಲೀಸರಿಗಿಲ್ಲ. ಯಾಕಂದರೆ ಸರ್ಕಾರವೇ ಬರುವವರಿಗೆ ಪಾಸ್​ ನೀಡಿದೆ.

ಕೇವಲ ಹೊರಗಡೆಯಿಂದ ಖಾಸಗಿ ವಾಹನದಲ್ಲಿ ಮಾತ್ರ ಜನರು ಜಿಲ್ಲೆ ಪ್ರವೇಶಿಸುತ್ತಿಲ್ಲ, ಬದಲಾಗಿ ಹೊರಗಡೆಯಿದ್ದ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಜಿಲ್ಲೆಗೆ ಬಂದಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಇಲ್ಲಿವರೆಗೂ ಸೈಲೆಂಟಾಗಿ ಮನೆಯಲ್ಲಿ ಕೂತಿದ್ದ ಜನರು, ಲಾಕ್ ಡೌನ್ ರಿಲ್ಯಾಕ್ಸ್ ಮಾಡಿದ್ದೇ ತಡ ಮೆಲ್ಲಗೆ ಮನೆಯಿಂದ ಹೊರಗೆ ಕಾಲಿಡತೊಡಗಿದ್ದಾರೆ. ಪಟ್ಣಣದಲ್ಲಿ ಬೇಕಾಬಿಟ್ಟಿ ಸುತ್ತಾಟ ನಡೆಸುತ್ತಿದ್ದಾರೆ. ಮದ್ಯದಂಗಡಿ ಎದುರು ಕ್ಯೂ ನಿಂತು ಅಪಾಯವನ್ನು ಆಹ್ವಾನಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆಪತ್ತು ತಂದಿಡುತ್ತಾ..? ಇಲ್ಲಿವರೆಗೂ ಕಟ್ಟುನಿಟ್ಟಾಗಿ ಮಾಡಿದ್ದ ಲಾಕ್ ಡೌನ್ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗುತ್ತಾ? ಅನ್ನೋ ಭೀತಿ ಜನರಲ್ಲಿ ಕಾಡುತ್ತಿದೆ.

Comments are closed.