ಕರ್ನಾಟಕ

ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರಿಂದ ನೂಕುನುಗ್ಗಲು; ದುಪ್ಪಟ್ಟು ಬಸ್ ದರ ಹೆಚ್ಚಿಸಿದ KSRTC

Pinterest LinkedIn Tumblr

ಬೆಂಗಳೂರು: ಲಾಕ್ ಡೌನ್ ಕಾರಣದಿಂದ ಕಳೆದ ಒಂದೂವರೆ ತಿಂಗಳಿನಿಂದ ನಗರದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರಿಗೆ ಶನಿವಾರ ಊರಿಗೆ ಹೋಗಲು ಒಂದು ಬಾರಿ ಸರ್ಕಾರ ಅವಕಾಶ ನೀಡಿರುವುದು ಇದೀಗ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾವಿರಾರು ಕಾರ್ಮಿಕರು ತಮ್ಮೂರಿಗೆ ತೆರಳಲು ಆಗಮಿಸಿದ್ದರು. ಮೆಜೆಸ್ಟಿಕ್ ನಲ್ಲಿ ನೂಕುನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಇಲ್ಲಿಗೆ ಗಾಳಿಗೆ ತೂರಿಹೋಗುತ್ತಿರುವುದು ಕಂಡುಬರುತ್ತಿದೆ.

ಕೆಎಸ್ ಆರ್ ಟಿಸಿಯಿಂದ ಹಗಲು ದರೋಡೆ: ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಿತಿಯ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ದೂರದೂರುಗಳಿಗೆ ಕರೆದುಕೊಂಡು ಹೋಗಬೇಕಾಗಿರುವುದರಿಂದ ಕೆಎಸ್ ಆರ್ ಟಿಸಿ ಎರಡು,ಮೂರು ಪಟ್ಟು ಹೆಚ್ಚು ದರ ಕೇಳುತ್ತಿದ್ದಾರೆ. ವಲಸೆ ಕೂಲಿ ಕಾರ್ಮಿಕರು ಸಾವಿರಾರು ರೂಪಾಯಿಗಳನ್ನು ಎಲ್ಲಿಂದ ತರುವುದು, ಕೆಎಸ್ ಆರ್ ಟಿಸಿ ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ.

ಬೆಳಗಾವಿ, ಧಾರವಾಡ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ಬೀದರ್, ರಾಯಚೂರು ಹೀಗೆ ಪ್ರತಿಯೊಂದು ಕಡೆಗೆ ಹೋಗುವ ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ಕೆಎಸ್ ಆರ್ ಟಿಸಿ ಈ ನಿರ್ಧಾರ ಕೈಗೊಂಡಿದಿಯೇ, ಸಂಬಂಧಪಟ್ಟ ಸಚಿವರು ಇದಕ್ಕೆ ಆದೇಶ ನೀಡಿದ್ದಾರೆಯೇ ಎಂದು ಸುದ್ದಿಮಾಧ್ಯಮಗಳು ಸಂಪರ್ಕಿಸಿ ಕೇಳೋಣವೆಂದರೆ ಸಚಿವರು ಸಂಪರ್ಕಕ್ಕೆ ಸಿಗುತ್ತಿಲ್ಲ.

Comments are closed.