
ಬೆಂಗಳೂರು: ಬಿಹಾರ ಮೂಲದ ನವವಿವಾಹಿತ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಶ್ರೀರಾಂಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ದಂಪತಿಗಳನ್ನು ರಾಹುಲ್ (30) ಹಾಗೂ ರಾಣಿ (26) ಎಂದು ಗುರುತಿಸಲಾಗಿದೆ. ಶ್ರೀರಾಂಪುರದ ದಯಾನಂದ ರಸ್ತೆಯಲ್ಲಿನ ತಮ್ಮ ಮನೆಯಲ್ಲಿ ಇವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಬಿಹಾರ ಮೂಲದ ಇವರು ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ದಂಪತಿಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಶುಕ್ರವಾರ ಸಂಜೆ ಮನೆ ಮಾಲೀಕರು ವಿದ್ಯುತ್ ಬಿಲ್ ನೀಡಲು ಆಗಮಿಸಿದ್ದ ವೇಳೆ ಮನೆ ಬಾಗಿಲು ತೆರೆದಿತ್ತು. ಒಳಬಂದು ನೋಡಿದಾಗ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ. ಪತ್ನಿ ರಾಣಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಪತಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ. ಶ್ರೀರಾಂಪುರ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ.
Comments are closed.