ಕರ್ನಾಟಕ

ಲಾಕ್‍ಡೌನ್ ನಿಂದಾಗಿ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚುವ ಅಪಾಯ-ಸಿದ್ಧರಾಮಯ್ಯ

Pinterest LinkedIn Tumblr


ಬೆಂಗಳೂರು: ಲಾಕ್‍ಡೌನ್ ಸಡಿಲ ಮಾಡುವಾಗ ಸರ್ಕಾರ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆರ್ಥಿಕ ಚಟುವಟಿಕೆಗಳು ರಾಜ್ಯದಲ್ಲಿ ಗರಿಗೆದರಬೇಕಾದರೆ ಲಾಕ್‍ಡೌನ್ ಸಡಿಲಿಕೆ ಅನಿವಾರ್ಯ. ಆದರೆ ಈ ವಿಷಯದಲ್ಲಿ ಸರ್ಕಾರ ವಿವೇಚನೆಯಿಂದ ತೀರ್ಮಾನ ಕೈಗೊಳ್ಳಬೇಕು ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

‘ಬಡವರು ಈಗ ಯಾವುದನ್ನೂ ಖರೀದಿ ಮಾಡುವ ಶಕ್ತಿ ಉಳಿಸಿಕೊಂಡಿಲ್ಲ. ಖರೀದಿ ಮಾಡುವ ಶಕ್ತಿ ಅವರಿಗೆ ಬರಬೇಕಾದರೆ ಸರ್ಕಾರ ಅವರಿಗಾಗಿ ಕೂಡಲೇ ಒಂದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕಿದೆ. ಇಲ್ಲದಿದ್ದರೆ ಜನ ಹಸಿವಿನಿಂದ ನರಳುವಂತಾಗುತ್ತದೆ. ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಉತ್ತಮವಾಗಿ ನಡೆದಾಗ ಮಾತ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹ ಸಾಧ್ಯ. ಲಾಕ್‍ಡೌನ್ ಇನ್ನಷ್ಟು ಬಿಗಿಯಾದರೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚುವ ಅಪಾಯವಿದೆ’ ಎಂದರು.

ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಮಾಡುವವರ ನೆರವಿಗೆ ಸರ್ಕಾರ ನಿಲ್ಲಬೇಕು. ಕೆಲಸ ಕಾರ್ಯಗಳು ಸ್ಥಗಿತಗೊಂಡು ಈ ವಲಯದ ಜನ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾಗುತ್ತಾ ಹೋದಂತೆ ಇವರ ಕಷ್ಟ ನಷ್ಟ ಇನ್ನಷ್ಟು ಹೆಚ್ಚಲಿದೆ. ಚುನಾಯಿತ ಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡದೇ ಹೋಗಿದ್ದರೆ ರಾಜ್ಯದಲ್ಲಿ ಹಾಹಾಕಾರ ಉಂಟಾಗಿ, ಜನ ಬೀದಿಗಿಳಿದು ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಅಂತಹ ಪರಿಸ್ಥಿತಿ ಎದುರಾಗದಂತೆ ಶ್ರಮಿಸಿದ ಎಲ್ಲರಿಗೂ ನಾನು ಕೃತಜ್ಞ’ ಎಂದು ಹೇಳಿದರು.

ನಿಗಮ-ಮಂಡಳಿಗಳಲ್ಲಿ ಆಗುತ್ತಿರುವ ಅನಗತ್ಯ ವೆಚ್ಚಕ್ಕೆ ಮೊದಲು ಕಡಿವಾಣ ಹಾಕಬೇಕು. ಅಲ್ಲಿಯ ಅಧಿಕಾರಿಗಳಿಗೆ ನೀಡುತ್ತಿರುವ ಸವಲತ್ತು ನಿಲ್ಲಿಸಿ, ತೀರಾ ಅಗತ್ಯ ಎನಿಸುವ ವಿಚಾರಗಳಿಗೆ ಮಾತ್ರ ವೆಚ್ಚ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆಯನ್ನೇ ಮಾಡುತ್ತಿಲ್ಲ, ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಮಾತ್ರ ಹೇಳುತ್ತಾರೆ’ ಎಂದರು.

Comments are closed.