ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನ 30 ಕೊರೊನಾ ಪಾಸಿಟಿವ್‌ ಕೇಸ್‌

Pinterest LinkedIn Tumblr


ಬೆಂಗಳೂರು: ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ 34 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿದ್ದರೆ, ಗುರುವಾರ ಒಂದೇ ದಿನ 30 ಪಾಸಿಟಿವ್‌ ಕೇಸ್‌ಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ.

ಇದು ಕರ್ನಾಟಕದಲ್ಲಿ ದಿನವೊಂದರಲ್ಲಿ ವರದಿಯಾದ ಮೂರನೇ ಗರಿಷ್ಠ ಪ್ರಕರಣವಾಗಿದೆ. ಈ ಮೂಲಕ ಕರ್ನಾಟಕ ಇನ್ನೇನು ಸೋಂಕು ಮುಕ್ತವಾಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಜನರನ್ನು ಆತಂಕಕ್ಕೆ ತಳ್ಳಿದೆ.

ಬೆಳಗಾವಿಯಲ್ಲಿ 14, ಬೆಂಗಳೂರಲ್ಲಿ 10!

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 14 ಬೆಳಗಾವಿ ಜಿಲ್ಲೆಯಿಂದ ವರದಿಯಾಗಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ 10 ಪ್ರಕರಣ ದೃಢಪಟ್ಟಿವೆ. ವಿಜಯಪುರದಲ್ಲಿ ಎರಡು ಪ್ರಕರಣ ದೃಢಪಟ್ಟಿದ್ದರೆ, ದಕ್ಷಿಣ ಕನ್ನಡ, ತುಮಕೂರು, ಕಲಬುರಗಿ ಮತ್ತು ದಾವಣಗೆರೆಯಲ್ಲಿ ತಲಾ 1 ಪ್ರಕರಣಗಳು ಖಚಿತವಾಗಿವೆ.

ಬರೋಬ್ಬರಿ 34 ದಿನಗಳ ನಂತರ ದಾವಣಗೆರೆಯಲ್ಲಿ ಬುಧವಾರ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಗುರುವಾರವೂ ಇಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇದರಿಂದ ‘ಸೋಂಕು ಮುಕ್ತ ಜಿಲ್ಲೆ’ ಭರವಸೆ ಹುಸಿಯಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲೂ ಇದೇ ರೀತಿ ಆಗಿತ್ತು.

20 ವರ್ಷದೊಳಗಿನ ಹಲವರಲ್ಲಿ ಸೋಂಕು
ಬೆಳಗಾವಿಯ 14 ಸೋಂಕಿತರಲ್ಲಿ 12 ಜನರು ಹಿರೇಬಾಗೇವಾಡಿಯವರಾಗಿದ್ದು, ಇವರಲ್ಲಿ 8 ವರ್ಷದ ಬಾಲಕಿ ಮತ್ತು 16 ಹಾಗೂ 18 ವರ್ಷ ಬಾಲಕರೂ ಸೇರಿದ್ದಾರೆ. ಇನ್ನಿಬ್ಬರು ಸೋಂಕಿತರು ಹುಕ್ಕೇರಿಯವರಾಗಿದ್ದು ಇವರಲ್ಲಿಯೂ ಓರ್ವ 9 ವರ್ಷದ ಬಾಲಕನಾಗಿದ್ದಾನೆ.

ಬೆಂಗಳೂರಿನಲ್ಲಿ 10 ಜನರಿಗೆ ಸೋಂಕು ತಗುಲಿದ್ದು ಖಚಿತಪಟ್ಟಿದೆ. ಇವರಲ್ಲಿ ಇಬ್ಬರಿಗೆ ಪಾದರಾಯನಪುರದಿಂದ ಸೋಂಕು ತಗುಲಿದೆ. 63 ವರ್ಷದ ಪುರುಷರೊಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ, 64 ವರ್ಷ ಮಹಿಳೆಯೊಬ್ಬರು ಇನ್‌ಫ್ಲುಯೆಂಜಾ ರೀತಿಯ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಉಳಿದವರು ಈ ಹಿಂದಿನ ರೋಗಿಗಳ ಸಂಪರ್ಕಿತರಾಗಿದ್ದಾರೆ. ಇವರಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಸೇರಿ 13 ಮತ್ತು 16 ವರ್ಷ ಬಾಲಕಿಯರಿಬ್ಬರು ಸೇರಿದ್ದಾರೆ.

ದಾವಣಗೆರೆಯಲ್ಲಿ 69 ವರ್ಷ ಪುರುಷರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಇವರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ದಿನದಿಂದ ದಿನಕ್ಕೆ ಐಸಿಯು ಸೇರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಬುಧವಾರ 14 ಜನರು ರೋಗದಿಂದ ಚೇತರಿಸಿಕೊಂಡಿದ್ದು ರಾಜ್ಯದಲ್ಲಿ ಇಲ್ಲಿಯವರೆಗೆ 229 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬುಧವಾರ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 300 ದಾಟಿದ್ದು 314ಕ್ಕೆ ಏರಿಕೆಯಾಗಿದೆ. ಇವರಲ್ಲಿ 305 ಜನರ ಆರೋಗ್ಯ ಸ್ಥಿರವಾಗಿದ್ದು ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 9ಕ್ಕೆ ಹೆಚ್ಚಳವಾಗಿದೆ.

ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ 21 ಜನರು ಸಾವನ್ನಪ್ಪಿದ್ದರೆ, ಓರ್ವ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Comments are closed.