ಕರ್ನಾಟಕ

ಪಾದರಾಯನಪುರ ಗಲಾಟೆ ಪ್ರಕರಣ: 50ಕ್ಕೂ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್‌

Pinterest LinkedIn Tumblr


ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆದೊಯ್ಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಗರದ ಪಶ್ಚಿಮ ವಿಭಾಗದ 50ಕ್ಕೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ

ಬಂಧಿತ ಐವರು ಆರೋಪಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಪೊಲೀಸರನ್ನು ಹೊಟೇಲ್ ಕ್ವಾರಂಟೈನ್‌ ಮಾಡಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ

ಅವರಲ್ಲಿ ಆರೋಪಿಗಳನ್ನು ಹತ್ತಿರ ದಿಂದ ಕರೆತಂದ ಹಾಗೂ ನೇರ ಸಂಪರ್ಕ ಹೊಂದಿದ 50ಮಂದಿ ಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ

ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಶಂಕಿತರನ್ನು ಕ್ವಾರಂಟೈನ್‌ ಮಾಡಲೆಂದು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಪಾದರಾಯನಪುರದ ಅರಫತ್ ನಗರಕ್ಕೆ ಹೋಗಿದ್ದಾಗಲೇ ಆರೋಪಿಗಳು ದಾಂಧಲೆ ನಡೆಸಿದ್ದರು. ಸ್ಥಳಕ್ಕೆ ಹೋಗಿದ್ದ ಹೆಚ್ಚುವರಿ ಸಿಬ್ಬಂದಿ, ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದರು.

ಹಲ್ಲೆ ಪ್ರಕರಣ ಸಂಬಂಧ ಐದು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸ್ಥಳೀಯ ಠಾಣೆ ಪೊಲೀಸರ 6 ತಂಡ ಹಾಗೂ ಸಿಸಿಬಿ ಪೊಲೀಸರನ್ನು ಒಳಗೊಂಡ 12 ವಿಶೇಷ ತಂಡಗಳನ್ನು ರಚಿಸಿದ್ದರು. ತಂಡದಲ್ಲಿದ್ದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದರು.

ನಗರ ಹಾಗೂ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಪಾದರಾಯನಪುರ ಗಲಾಟೆ ಪ್ರಕರಣದ 126 ಮಂದಿಯನ್ನು ಬಂಧಿಸಿ ರಾಮನಗರ ಜೈಲಿಗೆ ಕಳುಹಿಸುವ ಪ್ರಕ್ರಿಯೆ ವೇಳೆ ಪೊಲೀಸರು, ಆರೋಪಿಗಳನ್ನು ಮುಟ್ಟಿದ್ದಾರೆ. ಜೈಲಿಗೆ ಕಳುಹಿಸುವ ಮುನ್ನ ಆರೋಪಿಗಳನ್ನು ಕೋರಮಂಗಲದ ಕಟ್ಟಡವೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಯೂ 30ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಗೂ ಜೈಲಿಗೆ ಕರೆದೊಯ್ಯುವ ಜೀಪಿನಲ್ಲೂ ಪೊಲೀಸರು ಇದ್ದರು. ಹೀಗೆ, ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಪೊಲೀಸ್ ಸಿಬ್ಬಂದಿ ಯನ್ನು ಕ್ವಾರಂಟೈನ್‌ ಮಾಡಲಾಗಿದೆ.

Comments are closed.