ಕರ್ನಾಟಕ

ಹೂ ಬೆಳೆಗಾರರಿಗೆ 500 ಕೋಟಿಗೂ ಹೆಚ್ಚು ನಷ್ಟ: ಡಿ.ಕೆ. ಸುರೇಶ್

Pinterest LinkedIn Tumblr


ರಾಮನಗರ(ಏ. 19): ಬಿಡದಿಯ ಹಿರಿಯ ಕಾಂಗ್ರೆಸ್ ಮುಖಂಡ ಬ್ಯಾಟಪ್ಪ ಇಂದು 1 ಸಾವಿರ ಆಹಾರ ಕಿಟ್​ಗಳನ್ನ ಬಡಜನರಿಗೆ ವಿತರಣೆ ಮಾಡಿದರು. ಹಣ್ಣು, ತರಕಾರಿ ಹಾಗೂ ಎಲ್ಲಾ ರೀತಿಯ ದಿನಸಿ ಸಾಮಗ್ರಿಗಳನ್ನ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಬಡಜನರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಮನಗರ ಜಿಲ್ಲೆ ಹಾಗೂ ಆನೇಕಲ್​ನಲ್ಲಿ ರೈತರು ಹೂ ಬೆಳೆಯಲ್ಲಿ 500 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.

ಕೊರೋನಾ ಎಫೆಕ್ಟ್ ನಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಈಗ ದೇವಸ್ಥಾನಗಳು ಬಂದ್ ಆಗಿವೆ. ಸಮಾರಂಭಗಳು, ಮದುವೆಗಳು ನಡೆಯುತ್ತಿಲ್ಲ. ಬೆಳೆಯನ್ನ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ನಾವು ಈಗಾಗಲೇ ಸಿಎಂ ಗಮನಕ್ಕೆ ತಂದಿದ್ದೇವೆ. ಹಾಗಾಗಿ ಕೂಡಲೇ ನಷ್ಟಕ್ಕೊಳಗಾಗಿರುವ ರೈತರ ಬಗ್ಗೆ ಗಮನಹರಿಸಬೇಕೆಂದು ಒತ್ತಾಯ ಮಾಡಿದರು.

ಇನ್ನು ಈಗಾಗಲೇ ನಾನು ರಾಮನಗರ ಜಿಲ್ಲೆ ಹಾಗೂ ಹೊರಭಾಗದ 300 ರೈತರ ತೋಟಗಳಿಗೆ ಭೇಟಿ ಕೊಟ್ಟಿದ್ದೇನೆ. 2,500 ಟನ್​ಗೂ ಹೆಚ್ಚು ತರಕಾರಿ, ಹಣ್ಣು ಖರೀದಿ ಮಾಡಿ ಜಿಲ್ಲೆಯ ಜನರಿಗೆ ಎಲ್ಲವನ್ನು ಹಂಚುತ್ತಿದ್ದೇವೆ. ಹಾಗೆಯೇ ಪಕ್ಷದ ಮುಖಂಡರಿಗೂ ಖರೀದಿ ಮಾಡಲು ಮನವಿ ಮಾಡಿದ್ದೇನೆಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments are closed.