ಕರ್ನಾಟಕ

ಕೊಟ್ಟ ಸಾಲ ಕೊಡುವವರೆಗೂ ಅಂತ್ಯ ಸಂಸ್ಕಾರಕ್ಕೆ ಬಿಡುವುದಿಲ್ಲ: ಯಜಮಾನರ ಪಟ್ಟು

Pinterest LinkedIn Tumblr


ಚಾಮರಾಜನರ: ‘ಸಾಲದ ದುಡ್ಡು ವಾಪಸ್ ಕೊಡುವವರೆಗೂ ಶವ ಸಂಸ್ಕಾರಕ್ಕೆ ಬಿಡಲ್ಲ’ ಎಂದು ಯಜಮಾನರು ಪಟ್ಟು ಹಿಡಿದ ಅಮಾನವೀಯ ಘಟನೆ ಜಿಲ್ಲೆಯ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.

ಅಮಚವಾಡಿ ಗ್ರಾಮದ ನಿವಾಸಿ ಲಿಂಗರಾಜ್ ನಾಯಕ್ (45) ಮೃತ ವ್ಯಕ್ತಿ. ಅದೇ ಗ್ರಾಮದ ಯಜಮಾನರು ಲಿಂಗರಾಜ್ ಕುಟುಂಬಸ್ಥರಿಗೆ ಬಹಿಷ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸಾಲದ ಹಣ ಪಾವತಿಸುವವರೆಗೂ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಲಿಂಗರಾಜ್ ನಾಯಕ್ ಮೃತಪಟ್ಟು ಅರ್ಧ ದಿನವೇ ಕಳೆದು ಹೋಗಿತ್ತು. ಆತನ ಸಾವಿನ ಸುದ್ದಿ ಇಡೀ ಊರಿಗೆ ಹರಡಿತ್ತು. ಸಾವಿರಾರು ಜನರಿರುವ ಅಮಚವಾಡಿ ಗ್ರಾಮದ ಯಾರೊಬ್ಬರೂ ಲಿಂಗರಾಜ್ ಮನೆಗೆ ಕಡೆಗೆ ಸುಳಿಯಲಿಲ್ಲ. ಬೇರೆ ಬೇರೆ ಕಡೆಯಿಂದ ಬಂದ ನೆಂಟರಸ್ಥರಿಗೂ ಅಂತ್ಯ ಸಂಸ್ಕಾರ ಮಾಡದಂತೆ ಗ್ರಾಮದ ಯಜಮಾನರು ಅಲಿಖಿತ ಆದೇಶ ನೀಡಿದ್ದರು. ಹೊತ್ತು ಮುಳುಗುತ್ತಿದ್ದರೂ ಅಂತ್ಯ ಸಂಸ್ಕಾರ ಆಗದೇ ಇರುವುದನ್ನು ನೆನೆದು ಲಿಂಗರಾಜ್‍ನ ಮಕ್ಕಳು ಮತ್ತು ಪತ್ನಿ ಕಣ್ಣೀರಿಡುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತೆ ಮಾಡಿತ್ತು.

ಲಿಂಗರಾಜ್ ನಾಯಕ್‍ಗೆ ಇಬ್ಬರು ಪತ್ನಿಯರು ಹಾಗೂ ನಾಲ್ಕು ಮಕ್ಕಳಿದ್ದಾರೆ. ಮೊದಲನೇ ಹೆಂಡತಿ ಕಳೆದ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಳು. ಎರಡನೇ ಹೆಂಡತಿ ಪತಿಯ ಕಿರುಕುಳ ತಾಳಲಾರದೇ ತವರು ಮನೆ ಸೇರದ್ದಳು. ಮೊದಲನೇ ಹೆಂಡತಿ ಎರಡು ಮಕ್ಕಳನ್ನ ಮದುವೆ ಮಾಡಲಾಗಿತ್ತು. ಉಳಿದವರು ಬೇರೆ ಕಡೆ ವಾಸವಿದ್ದರು. ಹಾಗಾಗಿ ಲಿಂಗರಾಜ್ ನಾಯಕ್ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ.

ಮದ್ಯ ಕುಡಿತದ ದಾಸನಾಗಿದ್ದ ಲಿಂಗರಾಜ್ ವಿವಿಧ ಸಂಘಗಳಿಂದ ಸಾಲ ಮಾಡಿದ್ದ. ಸಾಲ ಕೊಡದೇ ಇದ್ದಾಗ ಗ್ರಾಮಸ್ಥರು ಅವನಿಗೆ 19,300 ರೂ. ಕೊಡುವವರೆಗೂ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಜೊತೆಗೆ ಲಿಂಗರಾಜ್ ಮೂರು ಎಕರೆ ಜಾಗವನ್ನು ಇಬ್ಬರಿಗೆ ಮಾರ್ಟ್ ಗೇಜ್ ಮಾಡಿ ಹಣ ಪಡೆದಿದ್ದ. ಬಹಿಷ್ಕಾರಕ್ಕೆ ಕ್ಯಾರೇ ಎನ್ನದೆ ತನ್ನಷ್ಟಕ್ಕೆ ತಾನು ಎಂಬತಿದ್ದ. ಆದರೆ ಇದ್ದಕ್ಕಿದ್ದಂತೆ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಮಕ್ಕಳು ಬಂದರೂ ಕೂಡ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಯಜಮಾನರು ಅವಕಾಶ ಕಲ್ಪಿಸಿರಲಿಲ್ಲ. ಅಷ್ಟೇ ಅಲ್ಲದೆ ಯಾರೂ ಕೂಡ ಮೃತ ಲಿಂಗರಾಜ್ ಮನೆಗೆ ಹೋಗುವಂತಿಲ್ಲ ಎಂದು ಯಜಮಾನರು ಗ್ರಾಮಸ್ಥರಿಗೆ ತಾಕೀತು ಮಾಡಿದ್ದರು.

19,300 ರೂ. ನೀಡ ಬೇಕು. ಜೊತೆಗೆ ಜಮೀನ್ನು ಮಾರ್ಟ್ ಗೇಜ್ ಮಾಡಿ ಪಡೆದಿರುವ ಒಂದೂವರೆ ಲಕ್ಷ ರೂ. ಹಣವನ್ನ ಕೊಡ ಬೇಕು ಎಂದು ಯಜಮಾನರು ಮೃತನ ಮಗನಿಗೆ ಹೇಳಿದ್ದರು. ಸಾವಿರಾರು ರೂಪಾಯಿ ಹಣ ಇಲ್ಲದೇ ಇರುವಾಗ ಲಕ್ಷಾಂತರ ರೂಪಾಯಿ ತರುವುದಾದರು ಎಲ್ಲಿಂದ ಎಂದು ಮೃತನ ಮಕ್ಕಳು ಯಜಮಾನರ ಬಳಿ ಅಂಗಲಾಚಿದ್ದರು. ಆದರೆ ಅದ್ಯಾವುದಕ್ಕೂ ಒಪ್ಪದ ಯಜಮಾನರು ಹಣ ನೀಡುವವರೆಗೆ ಶವ ಎತ್ತದಂತೆ ಕಟ್ಟಪ್ಪಣೆ ಹೊರಡಿಸಿದ್ದರು.

ಈ ಮಧ್ಯೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನಾಲ್ಕೈದು ಗಂಟೆಗಳ ಕಾಲ ಕುಳಿತ್ತಿದ್ದರು. ನಂತರ ಸಾಲಸೋಲ ಮಾಡಿ 19,300 ರೂ. ಕೊಡುತ್ತಿದ್ದಂತೆ ಶವ ಎತ್ತಲು ಅವಕಾಶ ಕಲ್ಪಿಸಲಾಯಿತು. ಆದರೂ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ಹೋಗದಂತೆ ನಿರ್ಬಂಧ ವಿಧಿಸಲಾಗಿತ್ತು.

ಇಂತಹ ಆಧುನಿಕ ಯುಗದಲ್ಲೂ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಜಾರಿಯಲ್ಲಿ ಇರುವುದು ಮಾತ್ರ ದುರಾದೃಷ್ಟ. ಬಹಿಸ್ಕಾರದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸದೇ ಇರುವುದು ಮಾತ್ರ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಸ್ಥಳಕ್ಕೆ ಬಂದ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಬಹಿಸ್ಕಾರ ಹಾಕಿದವರ ವಿರುದ್ಧ ಮಾತನಾಡದೇ ಇದ್ದದ್ದು ದುರ್ದೈವ ಎಂದು ಸ್ಥಳೀಯರು ದೂರಿದ್ದಾರೆ.

Comments are closed.