ಕರ್ನಾಟಕ

ಮಾಸ್ಕ್‌ನಿಂದ ಕೊರೊನಾ ಸೋಂಕು ತಡೆಯಲು ಸಾಧ್ಯವಿಲ್ಲ!

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಮೈಸೂರು, ಹಾಸನ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಮತ್ತೆ 4 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯವಾದರೆ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಮತ್ತು ಕಲಬುರಗಿಯಲ್ಲೂ ಪರೀಕ್ಷಾ ಕೇಂದ್ರಗಳನ್ನು ಆರಂಭ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಅವರು ವಿಧಾನಸಭೆಯಲ್ಲಿ ಕೊರೊನಾ ಕುರಿತು ಸರಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

”ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ವ್ಯವಸ್ಥೆಯನ್ನು ಬಿಗಿ ಮಾಡಲಾಗಿದೆ. ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಬೆಡ್‌ಗಳನ್ನು ಅಗತ್ಯ ಸಂದರ್ಭಕ್ಕೆ ಮೀಸಲಿಡಲು ಸೂಚಿಸಲಾಗಿದೆ” ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ರಾಜ್ಯದಲ್ಲಿ ಬಿಸಿಲು ಹೆಚ್ಚಿರುವ ಕಾರಣ ವೈರಸ್‌ ಹರಡುವ ಪ್ರಮಾಣ ತಗ್ಗುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಮಾಸ್ಕ್‌ನಿಂದ ಪ್ರಯೋಜನ ಇಲ್ಲ: ಮಾಸ್ಕ್‌ ಬಳಸಿದರೂ ಕೊರೊನಾ ವೈರಸ್‌ ಸೋಂಕು ತಡೆಯಲಾಗದು ಎಂಬ ಅಭಿಪ್ರಾಯವಿದೆ. ಆದರೆ, ಮಾಸ್ಕ್‌ಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ ಎಂಬ ದೂರಿನ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲು ಔಷಧ ನಿಯಂತ್ರಕರಿಗೆ ಸೂಚಿಸಲಾಗಿದೆ. ಮಾಸ್ಕ್‌ ಹಾಕಿಕೊಳ್ಳುವುದು ಒಂದು ಫ್ಯಾಷನ್‌ ಆಗಬಾರದು. ಕೈಕುಲುಕುವ ಬದಲು ಭಾರತೀಯ ಸಂಸ್ಕೃತಿಯಂತೆ ಕೈಮುಗಿಯುವುದು ಒಳ್ಳೆಯದು” ಎಂದು ಸಿಎಂ ಸಲಹೆ ಮಾಡಿದರು.

1,048 ಮಂದಿ ತಪಾಸಣೆ: ”ರಾಜ್ಯದಲ್ಲಿಈವರೆಗೆ 1,048 ಜನರನ್ನು ಕೊರೊನಾ ಸೋಂಕು ತಪಾಸಣೆಗೆ ಒಳಪಡಿಸಲಾಗಿದ್ದು, 66 ಜನರ ಮೇಲೆ ನಿಗಾ ವಹಿಸಲಾಗಿದೆ. ಈ ವರೆಗೆ ರೋಗ ಲಕ್ಷಣ ಇರುವ ಒಟ್ಟು 446 ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದ್ದು, 389 ಮಾದರಿಗಳು ನೆಗೆಟಿವ್‌ ಎಂದು ವರದಿಯಾಗಿದೆ. ಉಳಿದ ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಸೋಂಕು ತಗಲಿರುವ ನಾಲ್ವರಿಗೂ ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಆರೋಗ್ಯ ಸುಧಾರಿಸುತ್ತಿದ್ದು, ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ತಿಳಿಸಿದರು.

ಖಾಸಗಿಯವರಿಗೆ ಸೂಚನೆ: ”ಐಟಿ ಕಂಪೆನಿಗಳು ಸೇರಿ ಖಾಸಗಿ ಸಂಸ್ಥೆಗಳಿಗೆ ತಮ್ಮ ಸಿಬ್ಬಂದಿಯನ್ನು ವಿದೇಶಗಳಿಗೆ ಕಳಿಸದಂತೆ ಸೂಚನೆ ನೀಡಲಾಗಿದೆ. ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು ಆರೋಗ್ಯ ಸಹಾಯವಾಣಿ 104 ಸಂಖ್ಯೆಗೆ ಕರೆ ಮಾಡಬಹುದು” ಎಂದು ಡಾ.ಸುಧಾಕರ್‌ ತಿಳಿಸಿದರು.

Comments are closed.