ಕರ್ನಾಟಕ

ರಾಜ್ಯದಲ್ಲಿ ಮತ್ತೆ ಮೂವರಿಗೆ ಕೊರೊನಾ ವೈರಸ್!

Pinterest LinkedIn Tumblr


ಬೆಂಗಳೂರು: ಮಂಗಳವಾರ ಮತ್ತೆ ಮೂವರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮಾರ್ಚ್‌ 1ರಂದು ಅಮೆರಿಕದಿಂದ ಬಂದಿದ್ದ 46 ವರ್ಷದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿತ್ತು.

ಇದರ ಬೆನ್ನಲ್ಲೇ ಆ ಟೆಕ್ಕಿಯ ಜೊತೆ ಮನೆಯಲ್ಲಿಯೇ ವಾಸವಾಗಿದ್ದ ಅವರ ಪತ್ನಿ (47) ಹಾಗೂ ಮಗಳಿಗೆ (13) ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಮವಾರ ಟೆಕ್ಕಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಹೆಂಡತಿ ಹಾಗೂ ಮಗಳನ್ನು ಕರೆ ತಂದು ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಿಸಿ, ನಿಗಾ ವಹಿಸಲಾಗಿತ್ತು. ಜತೆಗೆ, ಅವರಿಗೂ ಸೋಂಕು ಪರೀಕ್ಷೆ ಮಾಡಲಾಗಿತ್ತು.

ಪರೀಕ್ಷಾ ವರದಿ ಮಂಗಳವಾರ ಬಂದಿದ್ದು, ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೂಂದು ಪ್ರಕರಣದಲ್ಲಿ, 50 ವರ್ಷದ ಟೆಕ್ಕಿ, ಅಮೆರಿಕ ಹಾಗೂ ಲಂಡನ್‌ ಪ್ರವಾಸ ಮುಗಿಸಿ ಭಾನುವಾರ (ಮಾ.8ಕ್ಕೆ) ಸಂಜೆ 6ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಳಿಕ ಸಿಬ್ಬಂದಿ ಸೂಚನೆಯಂತೆ ಆಫೀಸ್‌ ಸೇರಿದಂತೆ ಹೊರಗಡೆ ತೆರಳದೆ ಮನೆಯ ಕೋಣೆಯೊಂದರಲ್ಲಿ ಪ್ರತ್ಯೇಕವಾಗಿದ್ದರು.

ಸೋಮವಾರ ಬೆಳಗ್ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಗೆ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ತೆರಳಿ, ಒಳರೋಗಿಯಾಗಿ ದಾಖಲಾಗಿ ಸೋಂಕು ಪರೀಕ್ಷೆಗೆ ಒಳಗಾಗಿದ್ದಾರೆ. ಮಂಗಳವಾರ ಅವರ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ಇರುವುದಾಗಿ ದೃಢಪಟ್ಟಿದೆ. ಸದ್ಯ ಈ ಟೆಕ್ಕಿಯ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಮನೆಯಲ್ಲಿಯೇ ಇರಿಸಿದ್ದು, ಪ್ರತ್ಯೇಕವಾಗಿ ನಿಗಾ ವಹಿಸಲಾಗುತ್ತಿದೆ.

ಜತೆಗೆ 9 ಮಂದಿಯನ್ನು ಸಂಪರ್ಕಿತರು ಎಂದು ಪತ್ತೆ ಮಾಡಿದ್ದು, ಅವರನ್ನು ಮನೆಯಲ್ಲಿಯೇ ಇರಿಸಿ, ನಿಗಾ ವಹಿಸಲಾಗಿದೆ. ಸೋಮವಾರ ಕೊರೊನಾ ದೃಢಪಟ್ಟ 46 ವರ್ಷದ ಸೋಂಕಿತ ಟೆಕ್ಕಿಯ ಜತೆ ಆಫೀಸ್‌ನಲ್ಲಿ ಎರಡು ದಿನ ಕೆಲಸ ಮಾಡಿದ್ದ ಸಹೋದ್ಯೋಗಿಯ ಸೋಂಕು ಪರೀಕ್ಷೆಯ ವರದಿ ನೆಗೆಟಿವ್‌ ಬಂದಿದ್ದು, ಆತ ಮಂಗಳವಾರ ಸಂಜೆ ಮನೆಗೆ ತೆರಳಿದ್ದಾನೆಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ತಮ್ಮನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸಿ: ವಿದೇಶದಿಂದ ಬಂದವರಿಂದಲೇ ರಾಜ್ಯದಲ್ಲಿ ಸೋಂಕು ಹರಡುತ್ತಿದೆ. ಹೀಗಾಗಿ, ಕಳೆದ ಒಂದು ತಿಂಗಳಿಂದ ವಿದೇಶಕ್ಕೆ ತೆರಳಿ ಬಂದವರು ಸೋಂಕು ಲಕ್ಷಣ ಇರಲಿ, ಇಲ್ಲದೇ ಇರಲಿ. ಕಡ್ಡಾಯವಾಗಿ ಭಾರತಕ್ಕೆ ವಾಪಸ್ಸಾದ ನಂತರ 28 ದಿನಗಳು ಮನೆಯಲ್ಲಿಯೇ ಪ್ರತ್ಯೇಕ ನಿಗಾವಹಿಸಿ. ಜತೆಗೆ ಸಣ್ಣ ಪ್ರಮಾಣದ ಅನಾರೋಗ್ಯ ಕಾಣಿಸಿಕೊಂಡರೂ ಶೀಘ್ರ ಆಸ್ಪತ್ರೆಗೆ ತೆರಳಿ. ಈ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜತೆಗೆ, ಕುಟುಂಬ ಸೇರಿದಂತೆ ಇತರರನ್ನು ರಕ್ಷಿಸಿ ಎಂದು ವಿದೇಶ ಪ್ರಯಾಣ ಮಾಡಿ ಬಂದವರಿಗೆ ವೈದ್ಯಕೀಯ ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.

ಆರೋಗ್ಯ ಇಲಾಖೆಯಿಂದ ತೀವ್ರ ತಪಾಸಣೆ: ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದೆ. ವಿಮಾನ ನಿಲ್ದಾಣ ಹಾಗೂ ಗಡಿ ಪ್ರದೇಶದಲ್ಲಿ ತಪಾಸಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮುಂದಾಗಿದೆ. ಸೋಂಕಿತರು ಇದ್ದ ಪ್ರದೇಶ ಹಾಗೂ ಅವರು ಓಡಾಟ ನಡೆಸಿದ ಪ್ರದೇಶವನ್ನು ಸ್ವತ್ಛಗೊಳಿಸಲಾಗುತ್ತಿದೆ. ಟೆಕ್ಕಿಗಳ ಆಫೀಸ್‌ ಸಿಬ್ಬಂದಿಗೆ, ಸೋಂಕಿತ ಬಾಲಕಿಯ ಶಾಲಾ ಮಕ್ಕಳು, ನೆರೆ ಹೊರೆಯವರ ತಪಾಸಣೆ ಮಾಡಲಾಗುತ್ತಿದೆ. ಮನೆಯಲ್ಲಿ ನಿಗಾವಹಿಸುವುದರ ಜತೆಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಇಬ್ಬರ ತಪಾಸಣೆ
ಕಲಬುರಗಿ: ಜಿಲ್ಲೆಯ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಬ್ಬ ವ್ಯಕ್ತಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಮತ್ತೂಬ್ಬ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್‌ಗೆ ತೆರಳಿದ್ದು, ವರದಿ ಬರಬೇಕಿದೆ. ಇವರಿಬ್ಬರೂ ಇತ್ತೀಚೆಗೆ ವಿದೇಶದಿಂದ ಮರಳಿದ್ದು, ಕೆಮ್ಮು-ಜ್ವರ ಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ತಪಾಸಣೆ ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆಂದು ಬೆಂಗಳೂರಿಗೆ ರವಾನಿಸಲಾಗಿತ್ತು.

ಒಬ್ಬ ವ್ಯಕ್ತಿಯ ಮಾದರಿಯಲ್ಲಿ ನೆಗಟಿವ್‌ ಎಂದು ವರದಿ ಬಂದಿದೆ. ಇನ್ನೊಬ್ಬ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ತೆರಳಿದ್ದು, ಈತನ ವರದಿ ಮಾ.11ಕ್ಕೆ ಬರುವ ಸಾಧ್ಯತೆ ಇದೆ. ಈತನ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನು ತಪಾಸಣೆಗೆ ಒಳಪಡಿಸಿ, ಹೋಂ ಐಸೋಲೇಷನ್‌ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ. ಜಬ್ಟಾರ್‌ ತಿಳಿಸಿದ್ದಾರೆ.

Comments are closed.