ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಏನಾದರು ಹಣ ಸಿಕ್ಕಿದರೆ ಬಹುತೇಕ ಮಂದಿ ಆ ಕಡೆ, ಈ ಕಡೆ ಕಣ್ಣು ಹಾಯಿಸಿ ಅದನ್ನು ಜೇಬಿಗೆ ಹಾಕಿಕೊಂಡು ಹೋಗಿಬಿಡುತ್ತಾರೆ. ಇನ್ನು ಕೆಲವರು ತನ್ನದಲ್ಲದ ಹಣ ನನಗೆ ಏಕೆ ಎಂದು ಸುಮ್ಮನೆ ಹೋಗುತ್ತಾರೆ. ಆದರೆ ಶಿವಮೊಗ್ಗದ ಶಿಕ್ಷಕರೊಬ್ಬರು ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಹಣವನ್ನು ಪೊಲೀಸ್ ಠಾಣೆಗೆ ನೀಡಿ ಉದಾರತೆ ತೋರಿದ್ದಾರೆ.
ಶಿವಮೊಗ್ಗದ ಮಿಳ್ಳಘಟ್ಟ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶರಣಪ್ಪ(50) ಅವರು ಈ ಮಾದರಿ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮನವಿ ಸಲ್ಲಿಸಲು ಶರಣಪ್ಪ ಅವರು ಸಂಸದರ ಕಚೇರಿಗೆ ತರೆಳುತ್ತಿದ್ದರು. ಈ ವೇಳೆ ನಗರದ ತಹಶೀಲ್ದಾರ್ ಕಚೇರಿಯ ಕಟ್ಟಡದಲ್ಲಿರುವ ಸಂಸದರ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಮ್ಯಾಕ್ಸ್ ಆಸ್ಪತ್ರೆ ಬಳಿ ರಸ್ತೆ ಮೇಲೆ ಹಣ ಬಿದ್ದಿರುವುದನ್ನು ಶರಣಪ್ಪ ಗಮನಿಸಿದರು.
ತಕ್ಷಣ ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ ಹಣದ ಬಳಿ ಹೋದಾಗ ಐನೂರು ರೂಪಾಯಿಯ 20 ನೋಟುಗಳು ಅಂದರೆ 10 ಸಾವಿರ ರೂ. ಹಣ ಸಿಕ್ಕಿದೆ. ಅಲ್ಲಿದ್ದ ಆಟೋದವರು ಶರಣಪ್ಪ ಅವರಿಗೆ ಸಿಕ್ಕಿದ ಹಣವನ್ನು ಎಣೆಸಿದರು. ನಂತರ ಶರಣಪ್ಪ ಅವರು ಈ ಹಣಕ್ಕೆ ವಾರಸುದಾರರಿಲ್ಲ. ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ ಎಂದು ಜಯನಗರ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಪೇದೆ ಚಂದನ್ ಅವರಿಗೆ ಶರಣಪ್ಪ ಈ ಹಣವನ್ನು ನೀಡಿ, ನಡೆದ ಘಟನೆ ಬಗ್ಗೆ ವಿವರಿಸಿದರು. ಬಳಿಕ ಪೇದೆ ಹಣವನ್ನು ಪಡೆದು ಠಾಣೆಗೆ ವಾಪಸ್ಸಾದರು. 10 ರೂಪಾಯಿ ದಾರಿಯಲ್ಲಿ ಕಂಡರೆ ಜೇಬಿಗೆ ಹಾಕಿಕೊಂಡು ಹೋಗುವ ಜನರ ಮಧ್ಯೆ ಈ ಶಿಕ್ಷಕ ತಮಗೆ ಸಿಕ್ಕ 10 ಸಾವಿರ ರೂಪಾಯಿಯನ್ನು ಠಾಣೆಗೆ ಹಿಂತಿರುಗಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.
Comments are closed.