ಮನೋರಂಜನೆ

ತಮಿಳು ನಟ ಅಜಿತ್‌ ಕುಮಾರ್‌ಗೆ ಬೈಕ್‌ ಅಪಘಾತ!

Pinterest LinkedIn Tumblr


ನಟ ಅಜಿತ್‌ ಕುಮಾರ್‌ ‘ವಿಶ್ವಾಸಂ’ ಮತ್ತು ‘ನೇರ್ಕೊಂಡ ಪಾರವೈ’ ಸಿನಿಮಾಗಳ ಮೂಲಕ ಕಳೆದ ವರ್ಷ ಹಿಟ್‌ ನೀಡಿದ್ದರು. ಸದ್ಯ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ನಿರತವಾಗಿದ್ದ ಅವರಿಗೆ ವಿಘ್ನ ಎದುರಾಗಿದೆ. ಬೈಕ್‌ ಅಪಘಾತ ಆಗಿರುವುದರಿಂದ ಕೆಲವು ದಿನಗಳ ಕಾಲ ಚಿತ್ರೀಕರಣಕ್ಕೆ ಅವರು ಹಾಜರಾಗುವಂತಿಲ್ಲ.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಚ್‌. ವಿನೋದ್‌ ಆ್ಯಕ್ಷನ್‌-ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಅಜಿತ್‌ ತೊಡಗಿಕೊಂಡಿದ್ದಾರೆ. ಈ ಹಿಂದೆ ‘ನೇರ್ಕೊಂಡ ಪಾರವೈ’ ಚಿತ್ರದಲ್ಲಿ ಅಜಿತ್‌ ಮತ್ತು ವಿನೋದ್‌ ಜೊತೆಯಾಗಿ ಕೆಲಸ ಮಾಡಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಶೂಟಿಂಗ್‌ ವೇಳೆ ಅಪಘಾತ ಸಂಭವಿಸಿದೆ. ಚೆನ್ನೈನಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್‌ ಓಡಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿದ್ದರಿಂದ ಅವರು ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಬೈಕ್‌ನಿಂದ ಬಿದ್ದ ಅಜಿತ್‌ಗೆ ಗಾಯಗಳಾದವು. ಆದರೂ ಕೆಲವು ನಿಮಿಷಗಳ ಕಾಲ ಬ್ರೇಕ್‌ ತೆಗೆದುಕೊಂಡ ಅವರು, ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಂಡರಂತೆ. ಆ ದಿನದ ಶೂಟಿಂಗ್ ಮುಗಿದ ಬಳಿಕವಷ್ಟೇ ಫ್ಯಾಮಿಲಿ ಡಾಕ್ಟರ್‌ ಬಳಿ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂಬುದು ಮೂಲಗಳ ಮಾಹಿತಿ. ಒಟ್ಟಿನಲ್ಲಿ ಈ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ದಕ್ಷಿಣ ಭಾರತದಲ್ಲಿ ನಟ ಅಜಿತ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಜಿತ್‌ ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ #GetWellSoonTHALA ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಅವರಿಗಾಗಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

Comments are closed.