ಕರ್ನಾಟಕ

ಫೈನಾಶಿಯರ್ ಮನೆ ಬಳಿ ಬಂದು ಗಲಾಟೆ ಮಾಡಿದ್ದು ಸರಿಯಲ್ಲ: ದ್ವಾರಕೀಶ್ ಕಣ್ಣೀರು

Pinterest LinkedIn Tumblr


ಬೆಂಗಳೂರು: ಮನೆ ಮಾರಿಯಾದರೂ ನಾನು ಹಣ ಕೊಡುತ್ತೀನಿ. ಸಿನಿಮಾ ಬಿಟ್ಟು ಬೇರೆ ಏನೂ ಮಾಡಿಲ್ಲ. ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ಎಂದು ನೋವಿನಿಂದ ಹಿರಿಯ ನಟ ದ್ವಾರಕೀಶ್ ಮಾತನಾಡಿದರು. ಇದನ್ನೂ ಓದಿ: ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

ಫೈನಾಶಿಯರ್ ರಮೇಶ್ ಬಂದು ದ್ವಾರಕೀಶ್ ಮನೆಯಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕೀಶ್ ಹಾಗೂ ಪುತ್ರ ಯೋಗೇಶ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ದ್ವಾರಕೀಶ್, ಗಲಾಟೆ ನಡೆದ ದಿನ ನನ್ನ ಮಗ ಮನೆಯಲ್ಲಿ ಇರಲಿಲ್ಲ. ನಾನು ಮತ್ತು ನನ್ನ ಹೆಂಡತಿ ಮಾತ್ರ ಮನೆಯಲ್ಲಿದ್ವಿ. ನನಗೆ 78 ವರ್ಷ, ನನ್ನ ಹೆಂಡತಿಗೂ 78 ವರ್ಷ. ಮನೆಯಲ್ಲಿ ಇಬ್ಬರೇ ಇದ್ವಿ. ಮಧ್ಯಾಹ್ನ ಮನೆ ಬಳಿ ಬಂದವರು ಜೋರಾಗಿ ಬಾಗಿಲು ಬಡಿಯುತ್ತಿದ್ದರು. ನಾನು ಹೋಗಿ ಬಾಗಿಲು ತೆಗೆದೆ. ಏಕಾಏಕಿ ಮನೆಯೊಳಗೆ ನಾಲ್ಕು ಜನ ಬಂದರು. ಅವರಲ್ಲಿ ಜಯಣ್ಣ, ರಮೇಶ್ ಸೇರಿ ನಾಲ್ಕು ಜನ ಇದ್ದರು.

ಬಂದ ತಕ್ಷಣ ನಿಮ್ಮ ಮಗ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ ಎಂದು ಜೋರಾಗಿ ಮಾತನಾಡಿದರು. ನನಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅದರಲ್ಲಿ ರಮೇಶ್ ಅವರು ತುಂಬಾ ಜೋರಾಗಿ ಮಾತನಾಡಿದರು. ನಿಮ್ಮನ್ನ ಊಡೀಸ್ ಮಾಡುತ್ತೀವಿ ಎಂದು ಧಮ್ಕಿ ಹಾಕಿದರು. ಎಲ್ಲದಕ್ಕೂ ಕಾನೂನು ಅಂತ ಇದೆ. ಯಾವುದೇ ಕೆಲಸ ಆಗಲಿ ಕಾನೂನು ಪ್ರಕಾರ ಮಾಡಬೇಕು. ನಾನು ಹಣ ಕೊಡುವುದಿಲ್ಲ ಎಂದು ಹೇಳಿಲ್ಲ. ಆದರೆ ಅವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಎಂದರು.

ಕಾನೂನಿಗೋಸ್ಕರ ನಾನು ಪೊಲೀಸ್ ಠಾಣೆಗೆ ಹೋಗಿದ್ದೆ. ಅವರು ಪೊಲೀಸ್, ಕೋರ್ಟ್ ಎಂದು ಹೋಗಲಿ. ಕೋರ್ಟ್ ಏನಾದರೂ ಮನೆಯ ಮಾರಿ ಎಂದರೆ ಅದಕ್ಕೂ ರೆಡಿ ಇದ್ದೀನಿ. ದ್ವಾರಕೀಶ್ ಸುಮಾರು 80 ಕೋಟಿಯಷ್ಟು ಮನೆ ಮಾರಿದ್ದಾನೆ. ಮನೆ ಮಾರಿಯಾದರೂ ನಾನು ಹಣ ಕೊಡುತ್ತೀನಿ. ಸಿನಿಮಾ ಬಿಟ್ಟು ಬೇರೆ ಏನೂ ಮಾಡಿಲ್ಲ. ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು. ಏಕಾಏಕಿ ಬಂದು ಗಲಾಟೆ ಮಾಡೋದು ಎಷ್ಟು ಸರಿ? ಎಂದು ಕಣ್ಣೀರು ಹಾಕಿದರು.

ಇದೇ ವೇಳೆ ಪುತ್ರ ಯೋಗೇಶ್ ಮಾತನಾಡಿ, ಜಯಣ್ಣ ಬೇರೆಯವರಲ್ಲ, ನನಗೆ ಶತ್ರುವಲ್ಲ. ಅವರು ನನಗೆ ಕ್ಲೋಸ್ ಫ್ರೇಂಡ್. ದೊಡ್ಡ ಸಿನಿಮಾ ಅಲ್ವಾ ತುಂಬಾ ಜನರು ಬಂದಿದ್ದರು. ಕೆ. ಮಂಜು ಅವರೇ 9 ಕೋಟಿ ಆಫರ್ ಕೊಟ್ಟಿದ್ದರು. ಆದರೆ ಜಯಣ್ಣ ನಾನೇ ಮಾಡುತ್ತೀವಿ ಎಂದರು. ಆದರೆ ಸಿನಿಮಾ ಸೋತಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಸಿನಿಮಾ ಗೆದ್ದಾಗ ನಾವೆಲ್ಲರೂ ಬೇಕು, ಸೋತಾಗ ನಾವೊಬ್ಬರೇ ಅನುಭವಿಸಬೇಕಾ. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಒಂದು ಸಿನಿಮಾ ಸೋತರೆ ಮುಂದಿನ ಸಿನಿಮಾದಲ್ಲಿ ಕ್ಲೀಯರ್ ಮಾಡುತ್ತೀವಿ ಎಂದರು.

ಹಣ ವಾಪಸ್ ಕೇಳೋಕು ಒಂದು ರೀತಿ ಇದೆ. ಆದರೆ ಈ ರೀತಿ ಧಮ್ಕಿ ಹಾಕೋದಲ್ಲ. ಒಂದು ವರ್ಷ ಸಮಯ ಕೊಡಿ ಎಂದು ಕೇಳಿದ್ದೆ. ನಮಗೆ ಕನ್ನಡ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ನಮ್ಮ ತಂದೆ 50 ವರ್ಷದಿಂದ ಇದ್ದಾರೆ, ನಾನು 30 ವರ್ಷದಿಂದ ಇದ್ದೇನೆ. ಆದರೆ ಮನೆಯ ಬಳಿ ಬಂದು ಗಲಾಟೆ ಮಾಡೋದು ತಪ್ಪು. ನಮಗೂ ತುಂಬಾ ಜನರು ಹಣ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯ, ಕಾನೂನು ಇದೆ. ನನಗೆ ಯಾರ ಮೇಲೂ ಕೋಪ ಇಲ್ಲ. ಜಯಣ್ಣ ಕೇಳುವುದರಲ್ಲಿ ನ್ಯಾಯ ಇದೆ. ಅವರು ಹಣ ಕೊಟ್ಟಿದ್ದಾರೆ. ಅದಕ್ಕೆ ವಾಪಸ್ ಕೇಳಿದ್ದಾರೆ. ನಾವು ಕಾನೂನು ಪ್ರಕಾರ ವಾಪಸ್ ಕೊಡುತ್ತೀವಿ. ಕಚೇರಿ ಇದೆ ಬಂದು ಕುಳಿತುಕೊಂಡು ಮಾತನಾಡಲಿ. ಅದು ಬಿಟ್ಟು ಮನೆಗೆ ಬರುವುದು ಸರಿಯಲ್ಲ. ರಮೇಶ್ ಅವರಿಗೆ ನಮಗೂ ಏನೂ ಸಂಬಂಧ ಇಲ್ಲ. ಆದರೆ ಅವರು ಅಪ್ಪನ ಬಳಿ ಬಂದು ಮಾತನಾಡಿದ್ದು ತಪ್ಪು. ನಮಗೆ ಸಮಯ ಬೇಕು, ಸಿನಿಮಾ ಮಾಡಿ ಹಣ ವಾಪಸ್ ಕೊಡುತ್ತೀವಿ. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಲೆಕ್ಕಾಚಾರ ಮಾಡಿ ಹಣ ವಾಪಸ್ ಕೊಡುತ್ತೀನಿ ಎಂದು ತಿಳಿಸಿದರು.

Comments are closed.