ಕರ್ನಾಟಕ

ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಇಲ್ಲ: ರಾಮುಲು, ರಮೇಶ್ ಜಾರಕಿಹೊಳಿ ಕನಸು ಭಗ್ನ

Pinterest LinkedIn Tumblr


ಬೆಳಗಾವಿ: ನೂತನ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸದಾಗಿ ಯಾರನ್ನೂ ಉಪಮುಖ್ಯಮಂತ್ರಿಯನ್ನಾಗಿ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುವ ಮೂಲಕ ರಮೇಶ ಜಾರಕಿಹೊಳಿ, ಶ್ರೀರಾಮುಲು ಅವರ ಉಪಮುಖ್ಯಮಂತ್ರಿ ಹುದ್ದೆಯ ಕನಸು ಭಗ್ನ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಮೂವರೂ ಉಪಮುಖ್ಯಮಂತ್ರಿಗಳು ಮುಂದುವರಿಯಲಿದ್ದಾರೆ. ಯಾರನ್ನೂ ಬದಲಿಸುವುದಿಲ್ಲ. ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಗುರುವಾರ (ಜ. ೩೦)ದಂದು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗುವುದು. ೨-೩ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಉಪಚುನಾವಣೆಯಲ್ಲಿ ಗೆದ್ದವರನ್ನು ಸಂಪುಟಕ್ಕೆ ಸೇರಿಸಲಾಗುವುದು. ಹೈಕಮಾಂಡ್ ಬಯಸಿದರೆ ಒಂದಿಬ್ಬರನ್ನು ಕೈ ಬಿಡಬೇಕಾಗುತ್ತದೆ. ಹೈಕಮಾಂಡ್ ಜತೆಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಅಂತಾರಾಜ್ಯ ಗಡಿ ವಿವಾದ ಹಾಗೂ ಮಹಾದಾಯಿ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ. ಮಹಾರಾಷ್ಟ್ರದ ಜತೆ ನೀರು ವಿನಿಮಯ ಕುರಿತು ದೆಹಲಿಯಲ್ಲಿ ಚರ್ಚೆ ಮಾಡಲಾಗುವುದು ಎಂದ ಅವರು, ಸುವರ್ಣ ವಿಧಾನಸೌಧದಲ್ಲಿ ಎರಡು ತಿಂಗಳಿಗೊಮ್ಮೆ ಸಚಿವ ಸಂಪುಟದ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Comments are closed.