
ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಬಂಧಿತ ಆರೋಪಿ ಆದಿತ್ಯ ರಾವ್ ತಪ್ಪೊಪ್ಪಿಕೊಂಡಿದ್ದಾನೆ.
ಇಂದು ಮುಂಜಾನೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜ್ ಅವರ ಕಚೇರಿಗೆ ಆಗಮಿಸಿ ಆದಿತ್ಯ ರಾವ್ ಶರಣಾಗಿದ್ದಾನೆ. ಈ ವೇಳೆ ನಡೆದ ಪ್ರಾಥಮಿಕ ವಿಚಾರಣೆ ಸಮಯದಲ್ಲಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಯೂ ಟ್ಯೂಬ್ ನೋಡಿಕೊಂಡು ಬಾಂಬ್ ತಯಾರಿಸಿದ್ದಾನೆ. ಒಂದು ಎರಡು ಬಾರಿ ತಯಾರಿಕೆಯ ವೇಳೆ ಬಾಂಬ್ ಸಿಡಿದು ಕೈಗೆ ಏಟು ಮಾಡಿಕೊಂಡಿದ್ದ. ಭಯ ಪಡುವ ವ್ಯಕ್ತಿತ್ವ ಹೊಂದಿದ್ದ ಈತನಿಗೆ ಧೈರ್ಯ ಇರಲಿಲ್ಲ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ತನ್ನ ಫೋಟೋ ಪ್ರಕಟವಾಗುತ್ತಿದ್ದ ಭಯಗೊಂಡಿದ್ದ ಆದಿತ್ಯ ರಾವ್ ಉಡುಪಿಯಿಂದ ಆಗಮಿಸಿ ಇಂದು ಶರಣಾಗಿದ್ದಾನೆ. ಹಲಸೂರು ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರುವ ಆದಿತ್ಯ ರಾವ್ ನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಇಂದು ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಪ್ರತಿಕ್ರಿಯಿಸಿ, ಮಂಗಳೂರು ಪೊಲೀಸರ ತನಿಖಾ ತಂಡ ಶೀಘ್ರವೇ ಬೆಂಗಳೂರಿಗೆ ತೆರಳಲಿ ಆರೋಪಿಯನ್ನು ವಿಚಾರಣೆ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Comments are closed.