ಕರ್ನಾಟಕ

14ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅತ್ಯಾಚಾರ ಸಂತ್ರಸ್ತೆ

Pinterest LinkedIn Tumblr


ಚಾಮರಾಜನಗರ: ಅತ್ಯಾಚಾರ ಸಂತ್ರಸ್ತೆಯಾಗಿದ್ದ 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರ ಬಡಕುಟುಂಬದ ಬಾಲಕಿಯೊಬ್ಬಳು 14ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಳು. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಗೆಳೆತಿಯರು ಕೇಳಿದರೆ, ನನ್ನ ಹೊಟ್ಟೆಯಲ್ಲಿ ದುರ್ಮಾಂಸ ಬೆಳೆದಿದೆ ಎಂದು ಹೇಳುತ್ತಲೇ ಬಂದಿದ್ದಳು. ಆದರೆ ಕೊನೆಗೂ ರಹಸ್ಯ ಬಯಲಾಗಿದೆ.

ನೆರೆಮನೆಯ ಯುವಕನೊಬ್ಬನ ಬಾಲಕಿ ತಂದೆ-ತಾಯಿ ಕೂಲಿಗೆ ಹೋಗುತ್ತಿದ್ದಾಗ ಆಕೆಯನ್ನು ಪುಸಲಾಯಸಿ ದೈಹಿಕ ಸಂಪರ್ಕ ಬೆಳಸಿದ್ದ. ಆಗಾಗ್ಗೆ ಇದು ನಡೆಯುತ್ತಲೇ ಇತ್ತು. ದಿನ ಕಳೆದಂತೆ ಬಾಲಕಿ ಗರ್ಭಿಣಿಯಾಗಿದ್ದಳು. ಆದರೆ ವಿಷಯನ್ನು ಮುಚ್ಚಿಟ್ಟಿದ್ದಳು. ಆಕೆಯ ಹೊಟ್ಟೆ ದಪ್ಪ ಆಗಿರುವುದನ್ನು ನೋಡಿ ಅನುಮಾನಗೊಂಡು ಪೋಷಕರು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.

ಕೂಡಲೇ ಎಚ್ಚೆತ್ತುಕೊಂಡು ಪೋಷಕರು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಗರ್ಭಿಣಿಯಾಗಿದ್ದ ಬಾಲಕಿಯನ್ನು ಚಾಮರಾಜನಗರದ ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿತ್ತು. ಹೆರಿಗೆ ನೋವು ಕಾಣಿಸಿಕೊಂಡ ನಂತರ ಈಕೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿ ಹಾಗೂ ಮಗುವನ್ನು ಸ್ವಾಧಾರ್ ಗೃಹ ಕೇಂದ್ರದಲ್ಲಿ ಇಟ್ಟು ಆರೈಕೆ ಮಾಡುತ್ತಿದ್ದಾರೆ.

ಬಾಲಕಿ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿದ್ದು, ಇದಕ್ಕೆ ಬೇಕಾದ ಅನುಕೂಲ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಬಾಲಕಿ ಹಾಗೂ ಆಕೆಯ ತಂದೆ ತಾಯಿ ಒಪ್ಪಿದರೆ ಮಗುವನ್ನು ವಶಕ್ಕೆ ತೆಗುದುಕೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.

ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿ ಈಗ ಕಂಬಿ ಎಣಿಸುತ್ತಿದ್ದಾನೆ. ಮಗುವಿಗೆ ಜನ್ಮ ನೀಡಿದ ಬಾಲಕಿ ಸ್ವಾಧಾರ ಕೇಂದ್ರದಲ್ಲಿದ್ದಾಳೆ. ಈ ಬಾಲಕಿ ಹಾಗೂ ಬಾಲಕಿಯ ಮಗುವಿನ ಭವಿಷ್ಯ ಹೇಗೆ ಎಂಬ ಚಿಂತೆ ಪೋಷಕರನ್ನು ಕಾಡುತ್ತಿದೆ.

Comments are closed.