ಕರ್ನಾಟಕ

ಮುಸ್ಲಿಮ್ – ಬಿಲ್ಲವ ಸಮಾವೇಶ ವಿರೋಧಿಸಿ ಜೀವ ಬೆದರಿಕೆ: ದೂರು ದಾಖಲಿಸಿದ ಅಮೀನ್ ಮಟ್ಟು

Pinterest LinkedIn Tumblr


ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಮುಂದಾಗಿದ್ದ ಮುಸ್ಲಿಂ – ಬಿಲ್ಲವ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಅವರಿಗೆ ವ್ಯಕ್ತಿಯೋರ್ವ ಜೀವ ಬೆದರಿಕೆ ಒಡ್ಡಿದ್ದು, ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಹಾಗೂ ಬಿಲ್ಲವ ಸಮುದಾಯದ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ದಿನೇಶ್ ಅಮೀನ್ ಮಟ್ಟು ಅವರು ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿದ್ದರು.

ಆದರೆ ಸಮಾವೇಶಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆದಿತ್ತು. ಇದೇ ವಿಚಾರವಾಗಿ ಜನವರಿ 11 ರಂದು ಅಮೀನ್ ಮಟ್ಟು ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೋರ್ವ ತನ್ನನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಎಂದು ಪರಿಚಯಿಸಿಕೊಂಡಿದ್ದು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾನೆ.

ಕಾರ್ಯಕ್ರಮವನ್ನು ನಿಲ್ಲಿಸದೇ ಇದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಮೀನ್ ಮಟ್ಟು ಮಾತ್ರವಲ್ಲದೆ ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಅವರನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾನೆ. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಅಶ್ಲೀಲ ಪದಗಳ ಮೂಲಕ ನಿಂದಿಸಿದ್ದಾನೆ ಎಂದು ಅಮೀನ್ ಮಟ್ಟು ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಜೀವ ಬೆದರಿಕೆ ಒಡ್ಡಿರುವ ಆಡಿಯೋವನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಮಾಡಿದ್ದಾನೆ ಎಂದು ಆರೋಪಿಸಿರುವ ಅಮೀನ್ ಮಟ್ಟು ವಿಶ್ವನಾಥ್ ಪೂಜಾರಿ ಕಡ್ತಲ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 153(ಎ). 295 (ಎ) 504 ಹಾಗೂ 506 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.