ಕರ್ನಾಟಕ

‘ಪಕ್ಕೆಲುಬು’ ತಪ್ಪಾಗಿ ಉಚ್ಛರಿಸಿದ ವಿದ್ಯಾರ್ಥಿಯ ವಿಡಿಯೋ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಪತ್ರ

Pinterest LinkedIn Tumblr


ಬೆಂಗಳೂರು: ಶಾಲಾ ಪಾಠದ ಅವಧಿಯಲ್ಲಿ ‘ಪಕ್ಕೆಲುಬು’ ಪದವನ್ನು ತಪ್ಪಾಗಿ ಉಚ್ಛರಿಸುವ ವಿದ್ಯಾರ್ಥಿಯೋರ್ವನ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಈ ಕುರಿತಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಚಿವರು ಪತ್ರಬರೆದಿದ್ದು ಯಾವ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂಬುವುದನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡಿದ್ದಾರೆ.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕಿಯೊಬ್ಬರು ಬಾಲಕನೊಬ್ಬನಿಗೆ ‘ಪಕ್ಕೆಲುಬು’ ಉಚ್ಛಾರದ ಕುರಿತಾಗಿ ಪಾಠ ಮಾಡುವ ವಿಡಿಯೋ ಒಂದು ಹರಿದಾಡುತ್ತಿದೆ. ಶಿಕ್ಷಕಿ ಹೇಳಿಕೊಟ್ಟ ರೀತಿಯಲ್ಲಿ ಪದ ಉಚ್ಛಾರ ಮಾಡಲು ಬಾಲಕನಿಗೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ವಿಡಿಯೋ ಮಾಡಿದ ಶಿಕ್ಷಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಆಗಿದ್ದು ಶಿಕ್ಷಕಿಯ ವರ್ತನೆಗೆ ಹಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

ಈ ವಿಚಾರ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದ್ದು ಬಾಲಕನ ವಿಡಿಯೋ ಮಾಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳು ತಪ್ಪಾಗಿ ಉಚ್ಛಾರ ಮಾಡುವುದು ಸಹಜವೇ ಆಗಿದೆ. ನಿರಂತರ ಕಲಿಕೆಯಿಂದ ಆ ಪದದ ಕುರಿತಾಗಿ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಛಾರ ಸಾಧ್ಯವಾಗುತ್ತದೆ. ಮಗುಯೊಂದು ಕಲಿಕಾ ಹಂತದಲ್ಲಿ ತಪ್ಪು ಉಚ್ಛಾರ ಮಾಡಿರುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿರುವುದು ಅಪರಾಧ. ಅದು ಮಗುವಿಗೆ ಗೊತ್ತಾದಾಗ ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾಗಿ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು ಮಕ್ಕಳಿಗೆ ಸರಿಯಾದ ಉಚ್ಛಾರವನ್ನು ಕಲಿಸಿಕೊಡಬೇಕೇ ಹೊರತು ತಪ್ಪು ಉಚ್ಛಾರವನ್ನು ದೊಡ್ಡ ಅಪರಾಧದಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಯಾವ ಶಾಲೆಯಲ್ಲಿ ಮಾಡಲಾಗಿದೆ ಹಾಗೂ ವಿಡಿಯೋ ಮಾಡಿರುವ ಶಿಕ್ಷಕಿಯನ್ನು ಪತ್ತೆಹಚ್ಚಿ ಅವರ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸುರೇಶ್ ಕುಮಾರ್ ಸೂಚಿಸಿದ್ದಾರೆ. ಅಲ್ಲದೆ ಇಂತಹ ಕೃತ್ಯವನ್ನು ಯಾರಾದರು ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವ ಕುರಿತಾಗಿ ಸುತ್ತೋಲೆಯನ್ನು ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರದಲ್ಲಿ ಸೂಚಿಸಿದ್ದಾರೆ.

Comments are closed.