ಮನೋರಂಜನೆ

ದೀಪಿಕಾ ಪಡುಕೋಣೆ ಕುರಿತ ಅಗೌರವದ ಟ್ವೀಟ್‌: ಪೊಲೀಸರಿಂದ ಅಕೌಂಟ್ ಡಿ-ಆ್ಯಕ್ಟಿವೇಟ್‌

Pinterest LinkedIn Tumblr


ಬೆಂಗಳೂರು: ದಿಲ್ಲಿಯ ಜವಹಾರ್‌ಲಾಲ್‌ ನೆಹರು ವಿವಿಯಲ್ಲಿ ನಡೆದ ಹಿಂಸಾಚಾರ ವಿಚಾರದಲ್ಲಿ ಕರ್ನಾಟಕ ಪೊಲೀಸ್‌ ಗೃಹ ನಿರ್ಮಾಣ ನಿಗಮದ ಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರ ಟ್ವಿಟರ್‌ ಖಾತೆಯಿಂದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಕುರಿತ ಅಗೌರವದ, ಕಳಪೆ ಮಟ್ಟದ ಟ್ವೀಟ್‌ ಮಾಡಲಾಗಿದೆ. ಇದು ವಿವಾದ ಸೃಷ್ಟಿಸಿದೆ. ವಿವಾದ ಹೆಚ್ಚುತ್ತಿದ್ದಂತೆ ಟ್ವೀಟ್‌ ಖಾತೆ ಪರಿಶೀಲಿಸಿದಾಗ ‘ಔರಾದ್ಕರ್‌ ಅವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದ್ದು, ದುರುಪಯೋಗವಾಗಿದೆ. ಹೀಗಾಗಿ. ಖಾತೆಯನ್ನೇ ಡಿ-ಆ್ಯಕ್ಟಿವೇಟ್‌ ಮಾಡಲಾಗಿದೆ’ ಎಂದು ಬೆಂಗಳೂರು ಪೊಲೀಸ್‌ ಟ್ವಿಟರ್‌ ಖಾತೆಯಲ್ಲಿಸ್ಪಷ್ಟನೆ ನೀಡಲಾಗಿದೆ.

ಏನದು ಟ್ವೀಟ್‌: ”ದೀಪಿಕಾ ಪಡುಕೋಣೆ ಬಿಎಸ್‌ಎನ್‌ಎಲ್‌ ಜೊತೆ ಹೋದರು, ಅದು ಕುಸಿದು ಹೋಗಿದೆ. ಆರ್‌ಸಿಬಿ ತಂಡದ ಜೊತೆ ಹೋದರು, ಆರ್‌ಸಿಬಿ ಒಂದು ಬಾರಿಯು ಐಪಿಎಲ್‌ ಗೆಲ್ಲಲಿಲ್ಲ. ಜೂನಿಯರ್‌ ಮಲ್ಯ ಜೊತೆ ಹೋದರು, ಅವರ ಬಿಸಿನೆಸ್‌ ಬಿದ್ದು ಹೋಯಿತು ಮತ್ತು ಅವರ ತಂದೆ ವಿದೇಶದಲ್ಲಿ ತಲೆಮರೆಸಿಕೊಂಡರು. ಯುವರಾಜ್‌ ಜೊತೆ ಹೋದರು, ಆತನ ಕ್ರಿಕೆಟ್‌ ಜೀವನ ಬಹುತೇಕ ಮುಕ್ತಾಯಗೊಂಡಿತು. ಈಗ ತುಕ್ಡೆ ತುಕ್ಡೆ ಗ್ಯಾಂಗ್‌ ಜೊತೆಗಿದ್ದಾರೆ. ಶುಭವಾಗಲಿ” ಎಂದು ಟ್ವೀಟ್‌ ಮಾಡಲಾಗಿತ್ತು. ಆದರೆ, ಈ ಟ್ವೀಟ್‌ಗೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದವು.

ಮಹಿಳೆಯರನ್ನು ಕಳಪೆ ಮತ್ತು ಕೀಳು ಮಟ್ಟದಿಂದ ನೋಡುವ ಈ ಟ್ವೀಟ್‌ ಐಪಿಎಸ್‌ ಅಧಿಕಾರಿಯ ಹುದ್ದೆಗೆ ಘನತೆ ತರುವುದಿಲ್ಲ ಎಂದು ಟೀಕಿಸಲಾಗಿದೆ. ಯುವ ಕಾಂಗ್ರೆಸ್‌ ಮುಖಂಡ ರಕ್ಷ ರಾಮಯ್ಯ ”ಡಿಜಿಪಿ ದರ್ಜೆಯ ಅಧಿಕಾರಿಯಾಗಿರುವ ನೀವು, ಮಗಳ ವಯಸ್ಸಿನ ನಟಿಯನ್ನು ಟ್ರೋಲ್‌ ಮಾಡುತ್ತಿರುವುದು ಅವಮಾನಕಾರಿ ಸಂಗತಿ. ನೀವು ಪೊಲೀಸ್‌ ಆಯಕ್ತರಾಗಿದ್ದ ಅವಧಿಯಲ್ಲಿ ಶಾಲೆಯಲ್ಲಿಅತ್ಯಾಚಾರ ಘಟನೆ ನಡೆದಿದ್ದು, ನಿಮ್ಮನ್ನು ಎತ್ತಗಂಡಿ ಮಾಡಲಾಗಿತ್ತು. ಈ ತಿಂಗಳು ನಿವೃತ್ತಿಯಾಗುತ್ತಿರುವ ನೀವು ಏನನ್ನು ನಿರೀಕ್ಷೆ ಮಾಡುತ್ತಿದ್ದಿರೆಂದು” ಪ್ರಶ್ನಿಸಿದ್ದಾರೆ. ಟ್ವೀಟ್‌ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದ್ದಂತೆ ಖಾತೆಯನ್ನು ಡಿ-ಆ್ಯಕ್ಟಿವೇಟ್‌ ಮಾಡಲಾಗಿದೆ.

”ಔರಾದ್ಕರ್‌ ಅವರ ಖಾತೆ ಹ್ಯಾಕ್‌ ಆಗಿದ್ದು, ದುರುಪಯೋಗವಾಗಿದೆ. ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಕ್ರಮಕ್ಕೆ ಕೋರಿದ್ದೇವೆ. ಹೀಗಾಗಿ, ಆ ಖಾತೆಯಿಂದ ಆಗಿರುವ ಟ್ವಿಟ್‌ಗಳನ್ನು ನಿರ್ಲಕ್ಷ್ಯಿಸಿ” ಎಂದು ಬೆಂಗಳೂರು ಸಿಟಿ ಪೊಲೀಸ್‌ ಟ್ವಿಟರ್‌ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.

Comments are closed.