ಕರ್ನಾಟಕ

ಫೇಸ್‍ಬುಕ್ ನಲ್ಲಿ ಮುದ್ದಾದ ಯುವತಿಯ ರಿಕ್ವೆಸ್ಟ್- ಫೋಟೋ ನೋಡಿ 15 ಲಕ್ಷ ಕಳೆದುಕೊಂಡ

Pinterest LinkedIn Tumblr


ಧಾರವಾಡ/ಹುಬ್ಬಳ್ಳಿ: ಹುಡುಗಿಯ ಫೋಟೋ ನೋಡಿ ಫೇಸ್‍ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡ ಹುಬ್ಬಳ್ಳಿ ಉದ್ಯಮಿ ಇಂದು 14 ರಿಂದ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ತನ್ನ ಹಣ ವಾಪಸ್ ಕೊಡಿಸುವಂತೆ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಗಂಗಿವಾಳ ನಿವಾಸಿ ಟ್ರಾನ್ಸ್ ಪೋರ್ಟ್ ಉದ್ಯಮಿ ರುದ್ರಗೌಡ ಪಾಟೀಲ್ ಎಂಬವರಿಗೆ ಹಾಸನ ಮೂಲದ ಎನ್ನಲಾದ ಸುಷ್ಮಾ ಜೊತೆ ಫೇಸ್‍ಬುಕ್ ನಲ್ಲಿ ಸ್ನೇಹ ಬೆಳೆದಿತ್ತು. ಹುಡುಗಿಯೇ ಫ್ರೆಂಡ್ ರಿಕ್ವೆಸ್ಟ್ ನಂಬಿದ್ದ ರುದ್ರಗೌಡ ಸ್ನೇಹವನ್ನು ಬೆಳೆಸಿದ್ದರು. ಯುವತಿ ತನ್ನನ್ನು ಸುಷ್ಮಾ ಎಂದು ಪರಿಚಯ ಮಾಡಿಕೊಂಡು ಚೆಂದದ ನಕಲಿ ಫೋಟೋಗಳನ್ನು ಕಳಿಸಿದ್ದಳು. ಹೀಗೆ ಆಕೆಯ ಮೊಬೈಲ್ ನಂಬರ್ ಪಡೆದ ರುದ್ರಗೌಡ ವಾಟ್ಸಪ್ ನಲ್ಲಿ ಚಾಟ್ ಮಾಡಲಾರಂಭಿಸಿದ್ದರು.

ಯುವತಿ ಕಷ್ಟ ಎಂದಾಗಲೆಲ್ಲಾ ಆಕೆ ಹೇಳಿದ ಆರು ಬ್ಯಾಂಕ್ ಖಾತೆಗಳಿಗೆ ಸುಮಾರು 14 ರಿಂದ 15 ಲಕ್ಷ ರೂ. ಕಳುಹಿಸಿದ್ದಾರೆ. ರುದ್ರಗೌಡ ಕಳೆದ ಮೂರು ವರ್ಷಗಳಿಂದ ಚಾಟ್ ನಲ್ಲಿಯೇ ಯುವತಿಯ ಬಣ್ಣದ ಮಾತುಗಳನ್ನು ನಂಬಿದ್ದರು. ಕಳೆದ ಮೂರು ವರ್ಷಗಳಿಂದ ರುದ್ರಗೌಡ ಆಕೆ ಹೇಳಿದ ಖಾತೆಗಳಿಗೆ ಹಣ ಹಾಕತೊಡಗಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?
ಹುಡುಗಿ ವಾಟ್ಸಪ್ ಚಾಟ್ ನಲ್ಲಿ ಮಾಡ್ತಾ ಇದ್ದ ಮೇಸೇಜ್‍ಗಳನ್ನ ನಂಬಿದ್ದ ರುದ್ರಗೌಡ ಹುಡುಗಿಯ ಮೊಬೈಲ್‍ಗೆ ಪೋನ್ ಮಾಡಿದ್ರೆ ತಾನೂ ಮೂಕಿ. ಕಿವುಡಿ ಎಂದು ನಂಬಿಸಿದ್ದಳು. ಕೊನೆಗೆ ಹುಡುಗಿಯಿಂದ ಹಣ ವಾಪಸ್ ಕೇಳಿದ ವೇಳೆ ರುದ್ರಗೌಡನಿಗೆ ಸುಷ್ಮಾ ಎನ್ನುವ ಹೆಸರಿನಲ್ಲಿ ಪ್ರತಾಪ್ ಎಂ.ಡಿ. ಎಂಬಾತ ಚಾಟ್ ಮಾಡುವ ವಿಷಯ ತಿಳಿದಿದೆ. ಇದೇ ವೇಳೆ ಪ್ರತಾಪ್ ಎಂ.ಡಿ. ಹಣವನ್ನು ವಾಪಸ್ ನೀಡೋದಾಗಿ ಭರವಸೆ ನೀಡಿದ್ದನಂತೆ.

ಹಣ ವಾಪಸ್ ನೀಡದಿದ್ದಾಗ ರುದ್ರಗೌಡ ಇದೀಗ ಯುವತಿ ಹಾಗೂ ಆಕೆಯ ಕುಟುಂಬ ಸದಸ್ಯರಿಗೆ ಹಣ ಸಂದಾಯ ಮಾಡಿರುವ ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸಿ, ಅವರ ವಿರುದ್ಧ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಸಗಾರರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಿ ಮತ್ತು ನನ್ನ ಹಣ ವಾಪಸ್ ಬರುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡದ ಸೈಬರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Comments are closed.