ಕರ್ನಾಟಕ

ಕಳ್ಳತನಕ್ಕೊಂದು ಕಂಪನಿ, ಕಳ್ಳರಿಗೆ ಮಾಸಿಕ ವೇತನ!

Pinterest LinkedIn Tumblr


ತೀರ್ಥಹಳ್ಳಿ: ಕಳ್ಳತನ ಕೂಡ ಒಂದು ಉದ್ಯಮ. ಇದಕ್ಕೊಬ್ಬ ಬಾಸ್‌. ಖದೀಮರಿಗೆ ನಿಯಮಿತ ಸಂಬಳ. ಕಳ್ಳರು ಹೆಚ್ಚು ‘ದಕ್ಷತೆ’ ತೋರಿದರೆ ಅವರಿಗೆ ಬೋನಸ್‌. ಇಂತಹ ಬೆಚ್ಚಿ ಬೀಳಿಸುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮಲೆನಾಡಿನಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಳ್ಳತನಗಳು ಜರುಗುತ್ತಿದ್ದವು. ಇವುದಳನ್ನು ಬೆನ್ನತ್ತಿದ ಪೊಲೀಸರಿಗೆ ಇದೊಂದು ಅಂತಾರಾಜ್ಯ ಚೋರರ ಕೈವಾಡ ಎಂಬುದು ಖಚಿತವಾಗಿತ್ತು. ನಿರಂತರ ಪ್ರಯತ್ನದಿಂದ ತಮಿಳುನಾಡಿನ ತಿರುಚರಾಪಳ್ಳಿ ಜಿಲ್ಲೆಯ ಕಾರ್ತೀಕ್‌ ಮತ್ತು ಕಾರ್ತೀಕೆೇಯನ್‌ ಎಂಬ ಇಬ್ಬರು ಕಳ್ಳರು ತೀರ್ಥಹಳ್ಳಿಯಲ್ಲಿ ಸಿಕ್ಕಿಬಿದ್ದರು. ಇವರು ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದಾರೆ.

ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಶಾಂತರಾಜ್‌, ಆಪರ ರಕ್ಷಣಾಧಿಕಾರಿ ಡಾ.ಶೇಖರಪ್ಪ ಟಂಕಣ್ಣನವರ್‌ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ರವಿಕುಮಾರ್‌, ಸಿಪಿಐ ಗಣೇಶಪ್ಪ ನೇತೃತ್ವದ ತಂಡ ಸುಮಾರು 2 ತಿಂಗಳ ನಿರಂತರ ಪರಿಶೋಧನೆ ಫಲದಿಂದ ಈಗ ತನಿಖೆಗೆ ಆರಂಭಿಕ ಯಶಸ್ಸು ಸಿಕ್ಕಿದೆ. ಆಂಧ್ರದ ಗ್ಯಾಂಗ್‌ ಲೀಡರ್‌ ಮಲೆನಾಡು ಭಾಗದಲ್ಲಿ ಕಳ್ಳತನಕ್ಕಾಗಿಯೇ 8 ತಂಡಗಳನ್ನು ನೇಮಿಸಿದ್ದ ಎಂಬುದು ಇವರು ಬಹಿರಂಗ ಪಡಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಚೋರ ಶಾಖೆ
ಯುವಕರನ್ನು ಕಳವಿಗೆ ನೇಮಿಸಿದ್ದ ಆಂಧ್ರದಲ್ಲಿರುವ ಗ್ಯಾಂಗ್‌ ಲೀಡರ್‌, ನಿಯಮಿತ ಸಂಬಳ ಕೊಡುತ್ತಿದ್ದ. ಕಳವು ಮಾಲನ್ನು ಪಡೆದು ತಾನೇ ವಿಲೇವಾರಿ ಮಾಡುತ್ತಿದ್ದ ಎನ್ನಲಾಗಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರಗಳಿಗೆ ಕೂಡ ಪ್ರತ್ಯೇಕ ಬ್ರ್ಯಾಂಚ್‌ಗಳಿವೆ!

Comments are closed.