ಮನೋರಂಜನೆ

ಪ್ರೇಯಸಿ ಜೊತೆ ‘ಆ ದಿನಗಳು’ ನಟ ಚೇತನ್‌

Pinterest LinkedIn Tumblr


ಸಿನಿಮಾ ಮಾತ್ರವಲ್ಲದೆ, ಕೆಲವು ಸಮಾಜಮುಖಿ ಕೆಲಸಗಳಲ್ಲೂ ಚೇತನ್‌ ತೊಡಗಿಕೊಂಡಿರುತ್ತಾರೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಹೆಚ್ಚೇನೂ ಅವಸರ ತೋರದ ಅವರು ಸದ್ಯ ‘ರಣಂ’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಈ ನಡುವೆ ಅವರ ಮದುವೆ ಸುದ್ದಿ ಕೇಳಿಬರುತ್ತಿದೆ.

ಫೋಟೋ ಹಂಚಿಕೊಂಡ ಚೇತನ್‌
‘ಆ ದಿನಗಳು’, ‘ಸೂರ್ಯಕಾಂತಿ’, ‘ಬಿರುಗಾಳಿ’, ‘ಮೈನಾ’ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದವರು ಚೇತನ್‌ ಕುಮಾರ್‌. ಇನ್ನೇನು ಕೆಲವೇ ದಿನಗಳಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅಸ್ಸಾಂ ಮೂಲದ ಯುವತಿಯನ್ನು ಚೇತನ್‌ ಪ್ರೀತಿಸುತ್ತಿದ್ದಾರೆ. ಅವರ ಮನದರಸಿ ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗಿತ್ತು. ಈಗ ಸ್ವತಃ ಚೇತನ್‌ ಒಂದು ಫೋಟೋ ಹಂಚಿಕೊಂಡಿದ್ದಾರೆ. ಚೇತನ್‌ ಪ್ರೇಯಸಿ ಉತ್ತರ ಭಾರತದವರಾದರೂ ಕನ್ನಡ ಕಲಿಯುವ ಪ್ರಯತ್ನದಲ್ಲಿ ನಿರತರಾಗಿದ್ದಾರಂತೆ.

ಹೇಗಿದ್ದಾರೆ ಗೊತ್ತಾ ಚೇತನ್‌ ಪ್ರೇಯಸಿ?
ಆ ಯುವತಿ ಯಾರು? ಯಾವ ಉದ್ಯೋಗದಲ್ಲಿದ್ದಾರೆ? ಹೆಸರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಚೇತನ್‌ ಇನ್ನಷ್ಟೇ ಉತ್ತರ ನೀಡಬೇಕಿದೆ. ಅದಕ್ಕೂ ಮುನ್ನ ಒಂದು ಫೋಟೋವನ್ನು ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ಮನದರಸಿಯ ಜೊತೆ ರೊಮ್ಯಾಂಟಿಕ್‌ ಆಗಿ ಪೋಸ್‌ ನೀಡಿದ್ದಾರೆ. ಇಬ್ಬರೂ ಖುಷಿಯಲ್ಲಿರುವ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಮದುವೆಗೆ ತಯಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ಯಾವಾಗ ಮದುವೆ? ಎಲ್ಲಿ?
ಮೂಲಗಳ ಪ್ರಕಾರ ಇನ್ನೇನು ಕೆಲವೇ ದಿನಗಳಲ್ಲಿ ಚೇತನ್‌ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷವೆಂದರೆ, ಒಂದು ಅನಾಥಾಶ್ರಮದಲ್ಲಿ ಅವರ ಮದುವೆ ನಡೆಯಲಿದೆ. ಸಿನಿಮಾ ತಾರೆಯರ ವಿವಾಹ ತುಂಬ ಅದ್ದೂರಿಯಾಗಿ ನಡೆಯುವುದು ಸಹಜ. ಆದರೆ ಚೇತನ್‌ ತುಂಬ ಸರಳವಾಗಿ ಮದುವೆ ಮಾಡಿಕೊಳ್ಳಲಿದ್ದಾರೆ. ಯಾವ ಅನಾಥಾಶ್ರಮದಲ್ಲಿ ವಿವಾಹ ನಡೆಯಬೇಕು ಎಂಬುದರ ಬಗ್ಗೆ ಕುಟುಂಬದವರ ನಡುವೆ ಇನ್ನೂ ಚರ್ಚೆ ನಡೆಯುತ್ತಿದೆಯಂತೆ.

Comments are closed.