ಕರ್ನಾಟಕ

ಭಾರತ್ ಬಂದ್ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

Pinterest LinkedIn Tumblr

ಬೆಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಎಡಪಕ್ಷಗಳು ಬುಧವಾರ ದೇಶಾದ್ಯಂತ ಮುಷ್ಕರ ಕರೆ ನೀಡಿದ್ದು ಬಂದ್‌ಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಬಂದ್‌ ಬಿಸಿ ಹೆಚ್ಚಿನ ಪ್ರಮಾಣದಲ್ಲಿ ತಟ್ಟಿಲ್ಲ. ಈ ನಡುವೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಡಪಕ್ಷಗಳು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಸಿಪಿಐಎಂ, ಸಿಪಿಐ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಿವೆ. ಅಂಗನವಾಡಿ ಕಾರ್ಯಕರ್ತರು ಕೂಡಾ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪೀಣ್ಯದಲ್ಲೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸುಮಾರು 3000 ಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಗರದಲ್ಲಿ ಯಾರಾದರೂ ಬಲವಂತದ ಬಂದ್ ಮಾಡಲು ಪ್ರಯತ್ನ ಪಟ್ಟರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಶಾಂತವಾಗಿ ಪ್ರತಿಭಟನೆ ನಡೆಯುತ್ತಿದ್ದು ಇದುವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಾಟಾಲ್ ನಾಗರಾಜ್‌ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ವಾಟಾಲ್ ನಾಗರಾಜ್ ಪ್ರತಿಭಟನೆ ನಡೆಸುತ್ತಿದ್ದರು.

Comments are closed.