ಕರ್ನಾಟಕ

ಆಟೋಮೆಟಿಕ್ ಡೋರ್‍ನಿಂದ ಹೊರಗೆ ಬರಲಾಗದೆ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲಿಸಿದ ಮಾಲೀಕ

Pinterest LinkedIn Tumblr


ಬೆಂಗಳೂರು: ಕಳ್ಳತನ ಮಾಡಲು ಹೋದ ಮನೆಯಲ್ಲೇ ಕಳ್ಳನೊಬ್ಬ ಆತ್ಮಹತ್ಯೆ ಯತ್ನಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಳ್ಳನನ್ನು ಮನೆ ಮಾಲೀಕರೇ ಆಸ್ಪತ್ರೆಗೆ ಸೇರಿಸಿದ ಅಪರೂಪದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ನಗರದ ವಿಭೂತಿಪುರದಲ್ಲಿ ಘಟನೆ ನಡೆದಿದ್ದು, ಹೊಸ ವರ್ಷ ದಿನ ಮನೆ ಮಂದಿಯೆಲ್ಲ ದೇವಸ್ಥಾನಕ್ಕೆ ಹೋಗಿದ್ದಾರೆ. ಇದನ್ನು ಕಂಡ ಕಳ್ಳ ಸ್ವಸ್ತಿಕ್ ಮನೆಗೆ ನುಗ್ಗಿದ್ದಾನೆ. ಕಳ್ಳ ಮನೆಯೊಳಗೆ ಎಂಟ್ರಿಯಾಗಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾಗಿಲು ತಾನಾಗಿಯೇ ಲಾಕ್ ಆಗಿದೆ. ಇದು ಕಳ್ಳ ಸ್ವಸ್ತಿಕ್ ಅರಿವಿಗೆ ಬಂದಿಲ್ಲ. ಮನೆಯೆಲ್ಲ ಜಾಲಾಡಿದ ನಂತರ ಮರಳಿ ಹೊರಗೆ ಹೊರಟಿದ್ದಾನೆ. ಆಗ ಡೋರ್ ಲಾಕ್ ಆಗಿರುವುದು ತಿಳಿದಿದೆ.

ಆಟೋಮೆಟಿಕ್ ಡೋರ್ ಆಗಿದ್ದರಿಂದ ಕಳ್ಳ ಎಷ್ಟೇ ಪ್ರಯತ್ನಿಸಿದರೂ ತೆರೆಯಲು ಸಾಧ್ಯವಾಗಿಲ್ಲ. ಸಿಕ್ಕಿಹಾಕಿಕೊಂಡೆ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ಗ್ಯಾಸ್ ಪೈಪ್ ತಗೆದು ಮನೆಗೆ ಬೆಂಕಿ ಹಾಕಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಮನೆ ಮಾಲೀಕರು ದೇವಸ್ಥಾನದಿಂದ ಬಂದಿದ್ದಾರೆ. ಇದನ್ನು ಕಂಡ ಮಾಲೀಕರು ಸ್ಥಳೀಯರ ಸಹಾಯ ಪಡೆದು ಬೆಂಕಿ ನಂದಿಸಿ ಒಳಗಡೆ ಹೋಗಿ ನೋಡಿದ್ದಾರೆ.

ಮನೆ ಪೂರ್ತಿ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಆಗ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಕಳ್ಳ ಸ್ವಸ್ತಿಕ್‍ನನ್ನು ಕಂಡಿದ್ದಾರೆ. ಕೂಡಲೇ ಕಳ್ಳನನ್ನು ಮಾಲೀಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಘಟನೆ ಕುರಿತು ಮಾಲೀಕ ಮೋಹನ್ ಅವರು ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಕಳ್ಳ ಸ್ವಸ್ತಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಳ್ಳ ಸ್ವಸ್ತಿಕ್ ಸುಧಾರಿಸಿಕೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.