ಕರ್ನಾಟಕ

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ..! ಅವಳ ಒಂದು ತಪ್ಪು ಪೊಲೀಸರಿಗೆ ಸುಳಿವು ನೀಡಿತು..!

Pinterest LinkedIn Tumblr


ಯಾದಗಿರಿ: ಗಂಡನನ್ನೇ ಕೊಂದ ಹೆಂಡತಿ ಮತ್ತು ಆಕೆಯ ಪ್ರಿಯಕರ ಬರೋಬ್ಬರಿ 11 ತಿಂಗಳ ಬಳಿಕ ಖಾಕಿ ಬಲೆಗೆ ಬಿದ್ದಿದ್ದಾರೆ. ಅಶ್ವಿನಿ ಮತ್ತು ಆಕೆಯ ಪ್ರಿಯಕರ ಶಶಿಕುಮಾರ ಛತ್ರಿ ಬಂಧಿತ ಆರೋಪಿಗಳು. ಇಬ್ಬರೂ ಸೇರಿ ಜಗನ್ನಾಥ ಕಿಲ್ಲನಕೇರಾ ಎಂಬುವರನ್ನು ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣ ಪತ್ತೆ ಮಾಡುವಲ್ಲಿ ಗುರುಮಠಕಲ್‌ ಪ್ರಭಾರಿ ಸಿಪಿಐ ಹೊಸಕೇರಪ್ಪ ಕೆ. ಅವರ ತಂಡ ಯಶಸ್ವಿಯಾಗಿದೆ.

ಏನಿದು ಪತಿ, ಪತ್ನಿ ಔರ್‌ ವೋ..?

ಕೊಲೆಗೀಡಾದ ಜಗನ್ನಾಥ ಕಿಲ್ಲನಕೇರಾ ಎಂಬುವರು ಚಿರಂಜೀವಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಫೆಬ್ರವರಿ 22, 2019 ರಂದು ರಾತ್ರಿ ತಮ್ಮ ಮನೆಯಲ್ಲಿ ಮದ್ಯಪಾನ ಮಾಡಿ ನಿದ್ರಿಸುತ್ತಿದ್ದರು. ಈ ವೇಳೆ, ಜಗನ್ನಾಥ ಅವರ ಪತ್ನಿ ಅಶ್ವಿನಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಜಗನ್ನಾಥ ಅವರು ಮಲಗಿದಾಗಲೇ ತಲೆದಿಂಬು ಬಳಸಿ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇದಾದ ಮೇಲೆ ತುಂಬಾ ಗೌಪ್ಯತೆಯನ್ನು ಕಾಪಾಡಿದ್ದಾರೆ.

ಧರ್ಮಪುರ ಘಾಟ್‌ಗೆ ಶವ : ಗಂಡನನ್ನು ಕೊಲೆ ಮಾಡಿದ ಬಳಿಕ ಅಶ್ವಿನಿ ಮತ್ತು ಆಕೆಯ ಪ್ರಿಯತಮ ಶಶಿಕುಮಾರ ಛತ್ರಿ, ಶವವನ್ನು ಕಾರಿನ ಮೂಲಕ ಸಾಗಿಸಿದ್ದಾರೆ. ರಾತ್ರಿಯೇ ಗುರುಮಠಕಲ್‌ ತಾಲೂಕಿನ ಧರ್ಮಪುರ ಬಳಿಯಿರುವ ಘಾಟ್‌ಗೆ ತೆಗೆದುಕೊಂಡು ಹೋಗಿ, ರಸ್ತೆಯ ತಡೆಗೋಡೆ ಮೇಲೆ ಶವವಿಟ್ಟು ಗುಡ್ಡದ ಇಳಿಜಾರಿಗೆ ತಳ್ಳಿದ್ದಾರೆ. ರಾತ್ರಿಯೇ ಮನೆಗೆ ವಾಪಸ್‌ ಬಂದಿದ್ದಾರೆ. ಅಕ್ರಮ ಸಂಬಂಧದಿಂದಾಗಿ ಪತಿ ಜಗನ್ನಾಥ ಮತ್ತು ಅಶ್ವಿನಿ ನಡುವೆ ಆಗಾಗ ಜಗಳ ನಡೆಯುತಿತ್ತು. ಗಂಡನೇ ಅಡ್ಡಗಾಲಾಗಿ ಪರಿಣಮಿಸಿದ್ದಾನೆ ಎಂದು ಸಿಟ್ಟಿಗೆದ್ದ ಅಶ್ವಿನಿ, ಪ್ರಿಯತಮನೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಿಗೆ ಬಂದಿದೆ.

ಪ್ರಕರಣದ ತನಿಖೆ ನಡೆಸಲು ಗುರುಮಠಕಲ್‌ ಪ್ರಭಾರಿ ಸಿಪಿಐ ಹೊಸಕೇರಪ್ಪ ಕೆ. ನೇತೃತ್ವದಲ್ಲಿತಂಡ ರಚಿಸಲಾಗಿತ್ತು. ತಂಡದಲ್ಲಿ ಸೈದಾಪುರ ಪಿಎಸ್‌ಐ ಎನ್‌.ವೈ. ಗುಂಡೂರಾವ್‌, ಗುರುಮಠಕಲ್‌ ಪಿಎಸ್‌ ಶೀಲಾದೇವಿ, ಸಿಬ್ಬಂದಿಗಳಾದ ಗಣೇಶ, ಭೀಮರೆಡ್ಡಿ, ಸುಧಾಕರಡ್ಡಿ, ಶಿವರಾಜರೆಡ್ಡಿ, ಬಾಪುಗೌಡ, ರೇಣುಕಾರಾಜ, ಗೋವಿಂದ, ದಾವಲಸಾಬ್‌, ನಾಗೇಂದ್ರಮ್ಮ, ರುಕ್ಮಿಬಾಯಿ, ತಿಮ್ಮರಾಜ ಇದ್ದರು. ತಂಡಕ್ಕೆ ಎಸ್ಪಿ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಸುಳಿವು ಕೊಟ್ಟ ಮೊಬೈಲ್‌ ಕರೆಗಳು..!

ಪತಿಯ ಕೊಲೆ ಮಾಡಿದ ಪತ್ನಿ ಅಶ್ವಿನಿ ಜೈಲು ಪಾಲಾಗಲು ಆಕೆ ಬಳಸುತ್ತಿದ್ದ ಮೊಬೈಲ್‌ ಪ್ರಮುಖ ಕಾರಣವಾಗಿದೆ. ಪೊಲೀಸರು ತನಿಖೆ ವೇಳೆ ಆಕೆ ಯಾರಿಗೆ ಕರೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ವೇಳೆ ಅನುಮಾನ ಬಂದ ಕೆಲ ವ್ಯಕ್ತಿಗಳನ್ನು ವಿಚಾರಣೆ ಮಾಡಿದ ಬಳಿಕ ಕೊಲೆಗಾರರು ಯಾರು ಎಂಬುದು ಪೊಲೀಸರು ಪತ್ತೆ ಮಾಡಿದ್ದಾರೆ.

ಕೊಲೆ ಆಗಿದ್ದಾನೆಂದು ದೂರು

ಜಗನ್ನಾಥ ಕಿಲ್ಲನಕೇರಾ ಅವರ ಸಾವು ಮೊದಲು ಅಸಹಜ ಸಾವು ಎಂದು ಗುರುಮಠಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ಕೊಲೆಗೀಡಾದ ವ್ಯಕ್ತಿಯ ಸಹೋದರ ಶ್ರೀಕಾಂತ ಕಿಲ್ಲನಕೇರಾ ತಮ್ಮ ಅಣ್ಣನನ್ನು ಅತ್ತಿಗೆ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಪ್ರಕರಣ ಕೈಗೆತ್ತಿಕೊಂಡ ಪೊಲೀಸ್‌ ಇಲಾಖೆ, ಕೊನೆಗೂ ಆರೋಪಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

Comments are closed.