ಕರ್ನಾಟಕ

ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಮುಂದುವರಿದ ಪ್ರತಿಭಟನೆ

Pinterest LinkedIn Tumblr


ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರೋಧಿಸಿ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ, ಕಾಯ್ದೆ ಹಿಂದಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿದರು. ಬೆಂಗಳೂರಿನಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಿದರು.

ನಗರದ ಮಿಲ್ಲರ್ಸ್‌ ರಸ್ತೆಯ ಖುದ್ದೂಸ್‌ ಸಾಬ್‌ ಈದ್ಗಾ ಮೈದಾನ (ಖಾದ್ರಿಯಾ ಮಸೀದಿ-ಹಜ್‌ಕ್ಯಾಂಪ್‌)ದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ಕಾಯ್ದೆ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದರು. ಎಲ್ಲ ಧರ್ಮಿಯರು ಜಾತ್ಯತೀತವಾಗಿ ಬದುಕುತ್ತಿರುವ ದೇಶದಲ್ಲಿ ಕೇಂದ್ರ ಸರ್ಕಾರ ಅಸಂಬದ್ಧ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಒಡೆದು ಆಳುವ ನೀತಿ ಪಾಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಗೀತೆ ಹಾಡಿ ಸಮಾಪ್ತಿ: ಕಾಯ್ದೆ ವಿರುದ್ಧ ಪ್ರತಿಭಟಿಸಲು ಕಾನೂನು ಉಲ್ಲಂಘನೆ ಆಗಬಾರದು ಎಂದು ಮುಸ್ಲಿಂ ಸಮುದಾಯದ ಮುಖಂಡರು ಸಭೆಯಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿದರು. ಬಳಿಕ ಕಾರ್ಯಕ್ರಮದ ಕೊನೆಯಲ್ಲಿ ಜನರಿಗೆ ಕುರಾನ್‌ ಪಠಿಸಿ, ರಾಷ್ಟ್ರಗೀತೆ ಹಾಡಿದ ನಂತರ ಸಭೆಯನ್ನು ಸಮಾಪ್ತಿಗೊಳಿಸಿದರು.

ಭದ್ರತೆ ಮಾಹಿತಿ ಪಡೆದ ಸಿಎಂ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮ ಮತ್ತು ಒಟ್ಟಾರೆ ಕಾನೂನು ಸುವ್ಯವಸ್ಥೆಯ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಭಟ್ಕಳ ಸೇರಿ ಹಲವೆಡೆ ಪ್ರತಿಭಟನೆ ನಡೆಸಿದ ಸಿಪಿಎಂ, ಅಲ್ಪಸಂಖ್ಯಾತರು, ದಲಿತ ಸಂಘಟನೆಗಳು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರು ಪ್ರತಿ ಭ ಟನೆ ನಡೆಸಿ, ಧರ್ಮ, ಜಾತಿ, ಆಧಾರಿತ ಕಾಯ್ದೆಗಳ ಮೂಲಕ ಬಿಜೆಪಿ ಸರ್ಕಾರ ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸಲು ಹೊರಟಿದೆ ಎಂದು ಆರೋಪಿಸಿದರು.

ಕೋಲಾರದಲ್ಲಿ ಅಂಜುಮಾನ್‌ ಸಂಸ್ಥೆ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮೌಲ್ವಿಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡು, ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ನಿಷೇಧಾಜ್ಞೆ ನಡುವೆಯೂ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು.

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಕೊಲೆ ಯತ್ನ
ಬೆಂಗಳೂರು: “ಕೇಸರಿ ಬಟ್ಟೆ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ದುರುದ್ದೇಶದಿಂದ ವರುಣ್‌ ಅವರನ್ನು ಕೊಲೆ ಮಾಡಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥ ನಾರಾಯಣ ಹೇಳಿದರು.

ಪೌರತ್ವ ತಿದ್ದುಪಡಿ ಕಾಯಿದೆ ಪರ ನಡೆದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಿಜೆಪಿ ಕಾರ್ಯಕರ್ತ ವರುಣ್‌ ಅವರನ್ನು ಸೋಮವಾರ ಭೇಟಿಯಾಗಿ ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿ, ವರುಣ್‌ ಅವರು ಕೇಸರಿ ಬಟ್ಟೆ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ಅವರನ್ನು ಕೊಲ್ಲುವ ಉದ್ದೇಶದಿಂದ ತೀವ್ರತರವಾದ ದಾಳಿ ನಡೆಸಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಎಂದರು.

ಆರೋಪಿಗಳಿಗೆ ತೀವ್ರ ಶೋಧ: ವರುಣ್‌ ಕೊಲೆ ಯತ್ನ ಪ್ರಕರಣದ ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳು ಶೋಧ ಮುಂದುವರಿಸಿವೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸೋಮವಾರ ಕಲಾಸಿಪಾಳ್ಯ , ಕೆ.ಆರ್‌ ಮಾರುಕಟ್ಟೆ ಠಾಣೆಗಳ ರೌಡಿಶೀಟರ್‌ಗಳು, ಹಳೆ ರೌಡಿಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕವೂ ಗುರುತು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ ನಂತರವೂ ಕಾಂಗ್ರೆಸ್‌ ನಾಯಕರು ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆಯು ತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಕಾಂಗ್ರೆಸ್‌ ಪಕ್ಷದ ಕುತಂತ್ರ ಕಾರಣ. ಪೌರತ್ವ ಕಾನೂನಿಂದ ಯಾರಿಗೂ ತೊಂದರೆ ಯಾಗುವುದಿಲ್ಲ. ಯಾವ ಸಮುದಾಯವನ್ನೂ ಗುರಿಯಾಗಿಸಿಕೊಂಡು ತಿದ್ದುಪಡಿ ತಂದಿಲ್ಲ.
-ಆರ್‌.ಅಶೋಕ್‌, ಸಚಿವ

ಸಂವಿಧಾನವು ಭಾರತ ದೇಶವಾಸಿ ಗಳೆಲ್ಲರಿಗೂ ಸಮಾನ ವಾಗಿ ಹಕ್ಕುಗಳನ್ನು ನೀಡುತ್ತಿದ್ದು, ಈಗಿನ ಕೇಂದ್ರ ಸಂವಿಧಾನದ ಈ ಸಮಾನತೆಯ ಆಶಯಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾನೂನಿಗೆ ತಿದ್ದುಪಡಿ ತರುತ್ತಿದೆ.
-ರಮೇಶ್‌ ಕುಮಾರ್‌, ಮಾಜಿ ಸ್ಪೀಕರ್‌

Comments are closed.