ಕರ್ನಾಟಕ

ಆಟೋ ಚಾಲಕನ ಹತ್ಯೆ: ಕೆಲವೇ ನಿಮಿಷಗಳಲ್ಲಿ ಆರೋಪಿ ಬಂಧನ

Pinterest LinkedIn Tumblr


ಬೆಂಗಳೂರು: ನಿಲ್ದಾಣದಲ್ಲಿ ಆಟೋ ನಿಲುಗಡೆ ವಿಚಾರವಾಗಿ ಸ್ನೇಹಿತನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಕೆಲವೇ ನಿಮಿಷಗಳಲ್ಲಿ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.

ಸುದ್ದಗುಂಟೆಪಾಳ್ಯ ನಿವಾಸಿ ಸಂತೋಷ್‌ (27) ಕೊಲೆಯಾದ ಚಾಲಕ. ಕೃಷ್ಣಪ್ಪ ಗಾರ್ಡನ್‌ ನಿವಾಸಿ ಆನಂದ್‌(26) ಎಂಬಾತನನ್ನು ಬಂಧಿಸಲಾಗಿದೆ. ಕೊಲೆಯಾದ ಸಂತೋಷ್‌, ಮಹದೇವಪುರ ಠಾಣೆ ರೌಡಿ ಪಟ್ಟಿಯಲ್ಲಿದ್ದ. ಮೂರು ವರ್ಷಗಳ ಹಿಂದೆ ಮದುವೆಯಾಗಿ ಪತ್ನಿ ಜತೆ ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದ. ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸಂತೋಷ್‌ಗೆ ಆನಂದ ಸ್ನೇಹಿತನಾಗಿದ್ದ.

ಆಟೋ ಪಾರ್ಕಿಂಗ್‌ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಆನಂದ್‌, ಸಂತೋಷ್‌ ಮೇಲೆ ದ್ವೇಷ ಸಾಧಿಸುತ್ತಿದ್ದ. ಸುದ್ದಗುಂಟೆಪಾಳ್ಯದ ಸಂತೋಷ್‌ ಮನೆಗೆ ಶನಿವಾರ ಸಂಜೆ 6.40 ರ ವೇಳೆಗೆ ನುಗ್ಗಿದ ಆನಂದ, ಜಗಳ ತೆಗೆದು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ಬಳಿಕ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬೆನ್ನಟ್ಟಿ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

Comments are closed.