ಕರ್ನಾಟಕ

ತುಮಕೂರಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರಿಂದ ‘ಬೆಂಗಳೂರು ಚಲೋ ಜಾಥ’ ; ಸ್ಪಂದಿಸದ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

Pinterest LinkedIn Tumblr

ತುಮಕೂರು: ಅಂಗನವಾಡಿಗೆ ಎಲ್​ಕೆಜಿ ಮತ್ತು ಯುಕೆಜಿಯನ್ನು ಸೇರ್ಪಡೆಗೊಳಿಸಬೇಕು ಹಾಗೂ ಕನಿಷ್ಟ 21 ಸಾವಿರ ಮಾಸಿಕ ವೇತನ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಚಲೋ ಜಾಥ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಇಂದು ತುಮಕೂರಿನಲ್ಲಿ ಪ್ರತಿಭಟನೆ ನಿರತರಾಗಿದ್ದಾರೆ.

ಹೀಗೆ ಬೆಂಗಳೂರಿಗೆ ಹೊರಟ ಅಂಗನವಾಡಿ ಕಾರ್ಯಕರ್ತರ ಜಾಥ ಡಿಸೆಂಬರ್ 09 ರಂದು ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ ಉಪ ಚುನಾವಣೆ ಫಲಿತಾಂಶದ ಕಾರಣ ರಾಜಧಾನಿಯಲ್ಲಿ ಸೆಕ್ಷನ್ 144 ಜಾರಿ ಇದ್ದ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿಗೆ ನಿರ್ಧಾರ ಮಾಡಿದ್ದರು.

30 ಜಿಲ್ಲೆಗಳಿಂದ ಕನಿಷ್ಟ 7 ಸಾವಿರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಕಳೆದ ಮೂರು ದಿನಗಳಿಂದ ತುಮಕೂರಿನಲ್ಲಿ ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತುಮಕೂರಿನ ಅಮಾನಿಕೆರೆಯ ಬಳಿ ಪೊಲೀಸರು ತಡೆದ ಕಾರಣ ಅಲ್ಲೇ ಧರಣಿ ನಡೆಸುತ್ತಿರುವ ಮಹಿಳೆಯರು ಚಳಿ ಮಳೆ ಲೆಕ್ಕಿಸದೆ ಕೊರೆಯುವ ಚಳಿಯಲ್ಲಿ ರಸ್ತೆ ಬದಿಯಲ್ಲೇ ಮಲಗಿದ್ದಾರೆ.

ಕೆಲವರು ಪ್ರತಿಭಟನೆಗೆ ಮಕ್ಕಳ ಜೊತೆಗೆ ಆಗಮಿಸಿದ್ದು ಕನಿಷ್ಟ ಮೂಲಭೂತ ಸೌಲಭ್ಯಗಳೂ ಇಲ್ಲದೆ ಮಹಿಳೆಯರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಆದರೂ, ಈ ವರೆಗೆ ಯಾವುದೇ ಸರ್ಕಾರಿ ಅಧಿಕಾರಿಯಾಗಲಿ ನಾಯಕರಾಗಲಿ ಅವರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ.

ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

“ಯಡಿಯೂರಪ್ಪ ಎಲ್ಲಿದೀಯಪ್ಪ”  ?
ಒಂದೆಡೆ ತಮ್ಮ ಹಕ್ಕೊತ್ತಾಯಕ್ಕಾಗಿ ಅಂಗನವಾಡಿ ಮಹಿಳೆಯರು ಚಳಿಯನ್ನೂ ಲೆಕ್ಕಿಸದೆ ತುಮಕೂರಿನಲ್ಲಿ ರಸ್ತೆಗಳಲ್ಲಿ ಮಲಗಿದ್ದರೆ. ಇತ್ತಕಡೆ ಸಚಿವ ಸ್ಥಾನ ಹಂಚಿಕೆ ಕಸರತ್ತು ಜೋರಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರದ ಈ ಪ್ರಹಸನವನ್ನು ಟೀಕಿಸಿರುವ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ “ಯಡಿಯೂರಪ್ಪ ಎಲ್ಲಿದೀಯಪ್ಪ” ಎಂದು ಪ್ರಶ್ನಿಸಿದೆ.

ಅಲ್ಲದೆ, “ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸದೆ ಬಿಜೆಪಿ ಸರ್ಕಾರ ಕೋಮಾದಲ್ಲಿದೆಯಾ? ತುಮಕೂರಿನಲ್ಲಿ ಅನ್ನ ನೀರಿಲ್ಲದೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಮಲಗಿರುವ ಈ ಮಹಿಳೆಯರನ್ನು ನೋಡಿ ನಿಮಗೆ ಸಂಕಟವಾಗದೇನು? ಎಂದು ಕಟುವಾಗಿ ಟೀಕೆ ಮಾಡಿರುವ ಕಾಂಗ್ರೆಸ್ ಜಿಲ್ಲಾಡಳಿತದಿಂದ ಈ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಿ ಎಂದು ಒತ್ತಾಯಿಸಿದೆ.

Comments are closed.