ಕರಾವಳಿ

ಕುಂದಾಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ಅಮಾನತು‌ ಆದೇಶಕ್ಕೆ ತಡೆಯಾಜ್ಞೆ ನೀಡಿದ ಕೆಎಟಿ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರ ಅಮಾನತು ಆದೇಶಕ್ಕೆ ಕರ್ನಾಟಕ ನ್ಯಾಯ ಮಂಡಳಿ ತಡೆಯಾಜ್ಞೆ (ಕೆಎಟಿ) ನೀಡಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಉಮೇಶ ನಾಯಕ್ ಅವರಿಂದ ಅಧಿಕಾರ ಸ್ವೀಕರಿಸಿದ ರಾಬರ್ಟ್ ಅವರನ್ನು ಸ್ಥಳೀಯ ಮುಖಂಡರು ಅವರನ್ನು ಆಸ್ಪತ್ರೆಯಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿದರು ‌ಅಲ್ಲದೆ ಸಿಹಿ ಹಂಚಿ‌ ಸಂಭ್ರಮಿಸಿದರು. ಇದೇ ವೇಳೆ ಆಸ್ಪತ್ರೆಯ ಇತರ ವೈದ್ಯರು, ಸಿಬ್ಬಂದಿಗಳು ವೈದ್ಯರಿಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂಬ ಹಂಬಲ ನನ್ನದು. ನಗು ಮೊಗದ ಸೇವೆ ನೀಡುವ ಪರಿಕಲ್ಪನೆಯಡಿಯಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಜೊತೆಗೆ ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದು ಕೆಲವು ವೈದ್ಯರು ಸಮಯ ಪಾಲನೆ ಮಾಡುತ್ತಿಲ್ಲ ಮತ್ತು ಬ್ರಾಂಡೆಡ್ ಔಷಧಿ ಬರೆದುಕೊಡುತ್ತಾರೆ. ಇದನ್ನೆಲ್ಲಾ ವಿರೋಧಿಸಿದ್ದಕ್ಕೆ ನನ್ನನ್ನು ಕೆಟ್ಟವನೆಂದು ಬಿಂಬಿಸಲಾಗುತ್ತಿದೆ‌ ಆಡಳಿತ ವೈದ್ಯಾಧಿಕಾರಿಯಾಗಿ ಸದ್ಯ ಒಂದೂವರೆ ವರ್ಚದ ಅವಧಿಯಲ್ಲಿ ಸಾರ್ವಜನಿಕರು ಸರಕಾರಿ ಆಸ್ಪತ್ರೆಯ ಬಗ್ಗೆ ಯಾವುದೇ ದೂರು, ಅಸಮಾಧಾನ ಹೊರಹಾಕಿಲ್ಲ. ಇದೇ ತೃಪ್ತಿಯಲ್ಲಿ ಮುಂದೆಯೂ ಉತ್ತಮ ಕೆಲಸ ಮಾಡುವೆ ಎಂದರು.

ನನ್ನ ಬಗ್ಗೆ ಹುರುಳಿಲ್ಲದ ಕೆಲವು ಆರೋಪಗಳನ್ನು ಮಾಡಿ ಮೌಖಕವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ದೇವಸ್ಥಾನದ ಪ್ರಕರಣದ ತನಿಖೆಯ ಕಾರಣ ನೀಡಲಾಗಿದ್ದು ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿರಲಿಲ್ಲ. ನ್ಯಾಯಾಂಗದ ಮೇಲೆ ಭರವಸೆಯಿಟ್ಟು ಕರ್ನಾಟಕ ನ್ಯಾಯ ಮಂಡಳಿ ಮೊರೆ ಹೋಗಿದ್ದು, ಅಮಾನತು ಆದೇಶಕ್ಕೆ ತಡೆ ಸಿಕ್ಕಿದೆ ಎಂದರು.

ತಡವಾಗಿ ಬಂದ ವೈದ್ಯೆಗೆ ತರಾಟೆ!
ಇದೇ ಸಮಯ ಸಾರ್ವಜನಿಕರು ನೆರೆದಿದ್ದಾಗಲೇ ಆಸ್ಪತ್ರೆಯ ನೇತ್ರ ತಜ್ಞೆ ವೈದ್ಯೆ ಮುಕ್ಕಾಲು ಗಂಟೆ ವಿಳಂಭವಾಗಿ ಕರ್ತವ್ಯಕ್ಕೆ ಬಂದಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ವೈದ್ಯೆಯನ್ನು ತರಾಟೆಗೆತ್ತಿಕೊಂಡು ಮೂರ್ನಾಲ್ಕು ದಿನಗಳಿಂದ ತನಗಾದ ಸಮಸ್ಯೆ ಕುರಿತು ಆಕ್ರೋಷ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಕೂಡ ಮುಂದಕ್ಕೆ ಈ ರೀತಿ ಮರುಕಳಿಸದಂತೆ ವೈದ್ಯೆಗೆ ಸೂಚಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.