ಕರ್ನಾಟಕ

ವೆಬ್‌ಸೈಟ್‌ನಲ್ಲಿ ಖಾಸಗಿ ಶಾಲೆಯ ಶುಲ್ಕ ವಿವರ ಪ್ರಕಟ ಕಡ್ಡಾಯ!

Pinterest LinkedIn Tumblr


ಬೆಂಗಳೂರು: ರಾಜ್ಯದ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, 2020-21ನೇ ಶೈಕ್ಷಣಿಕ ವರ್ಷದ ಶುಲ್ಕ ಹಾಗೂ ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಕಡ್ಡಾಯವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶಿಸಿದೆ. ಎಲ್ಲ ಖಾಸಗಿ ಅನುದಾನರಹಿತ ಶಾಲೆಗಳು 2019ರ ಡಿಸೆಂಬರ್‌ 31ರ ಅಂತ್ಯದೊಳಗೆ ಶುಲ್ಕದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಳವಡಿಸ ಬೇಕು. ವಿದ್ಯಾರ್ಥಿಗಳಿಗೆ ಹಾಗೂ ಪಾಲಕ- ಪೋಷಕರಿಗೆ ಇದರಿಂದ ಅನುಕೂಲವಾಗಲಿದೆ.

ಎಲ್ಲ ಅನುದಾನರಹಿತ ಶಾಲೆಗಳ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿ ಸಾಧನೆ, ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಐಡಿ ಮತ್ತು ಪಾಸ್‌ವರ್ಡ್‌ ಬಳಸಿಕೊಂಡು sts.karnataka.gov.in ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ, know my school ವಿಭಾಗದಲ್ಲಿ ಶಾಲೆಯು 2020-21ನೇ ಸಾಲಿನಲ್ಲಿ ವಿಧಿಸಬಹುದಾದ ಶುಲ್ಕವನ್ನು ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಪ್ರಕಟಿಸಬೇಕು ಎಂದು ಎಚ್ಚರಿಕೆ ನೀಡಿದೆ. ಎಲ್ಲ ಶಾಲೆಗಳು ಶುಲ್ಕದ ಮಾಹಿತಿಯನ್ನು ದಾಖಲಿಸದ ಶಾಲೆಗಳಿಗೂ ಸೂಕ್ತ ತಿಳುವಳಿಕೆ ನೀಡಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ.

ಯಾವ ದಾಖಲೆಗಳನ್ನು ಸಲ್ಲಿಸಬೇಕು?: ಮುಂಬರುವ ಶಿಕ್ಷಣಿಕ ವರ್ಷದ ಅವಧಿಗಾಗಿ ಶುಲ್ಕಗಳು, ಶುಲ್ಕದ ನಿರ್ಧಾರ ಮತ್ತು ಪಾಲನೆ, ಬೋಧನಾ ಸಿಬ್ಬಂದಿ ವಿವರ, ಪಬ್ಲಿಕ್‌ ಪರೀಕ್ಷೆ ಫ‌ಲಿತಾಂಶ ಹಾಗೂ ಪ್ರಮಾಣ ಪತ್ರವನ್ನು ಮತ್ತು ಇದೆಲ್ಲ ಮಾಹಿತಿಗೆ ಪೂರಕವಾಗಿ ಪ್ರಮಾಣಿಕೃತ ಲೆಕ್ಕ ಪರಿಶೋಧನಾ ವರದಿ ಹಾಗೂ ಇತರೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಪೂರ್ವ ಪ್ರಾಥಮಿತ ತರಗತಿಗಳಾದ ಎಲ್‌ಕೆಜಿ, ಯುಕೆಜಿ ಸಹಿತವಾಗಿ 1ರಿಂದ 10ನೇ ತರಗತಿ(ಪ್ರಾಥಮಿಕ ಹಾಗೂ ಪ್ರೌಢಶಾಲೆ), ಪಿಯುಸಿ ವಿಭಾಗ ಇದ್ದಲ್ಲಿ ಪ್ರಥಮ ಮತ್ತು

ದ್ವಿತೀಯ ಪಿಯುಸಿ ತರಗತಿಗಳಿಗೆ ವಿಧಿಸುವ ಬೋಧನಾ ಶುಲ್ಕ, ಅವಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕದ ವಿವರ, ಲೆಕ್ಕ ಪರಿಶೋಧನಾ ವರದಿಯ ಪ್ರಕಾರ ಶಾಲೆಗಾಗಿ ಖರ್ಚು ಮಾಡಿರುವ ಮೊಬಲಗಿನ ಹೊಂದಾಣಿಕೆ, ಬೋಧಕರ ವೇತನ, ಬೋಧಕೇತರ ಮತ್ತು ಇತರೆ ಸಿಬ್ಬಂದಿ ವೇತನ, ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ನೀಡಿರುವ ರಿಯಾಯತಿ, ಪಠ್ಯೇತರ ಚಟುವಟಿಕೆಗಳ ವೆಚ್ಚ, ನಿರ್ವಹಣಾ ವೆಚ್ಚ, ಒಟ್ಟು ಮಕ್ಕಳ ಸಂಖ್ಯೆ ಇತ್ಯಾದಿಗಳನ್ನು ಕಡ್ಡಾಯವಾಗಿ ಈ ವರ್ಷದಿಂದ ಪ್ರಕಟಿಸಲೇ ಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರ ಜತೆಗೆ ವಿದ್ಯಾರ್ಥಿಗಳ ಪಾಲಕ-ಪೋಷಕರ ಒಪ್ಪಿಗೆ ಪಡೆದು ವಿಶೇಷ ಕ್ರೀಡಾ ಶುಲ್ಕ, ಸಾಂಸ್ಕೃತಿಕ ಮತ್ತು ಇತರೆ ತರಬೇತಿ ಶುಲ್ಕ, ವಿಶೇಷ ಬೋಧನೆ ನಡೆಸುತ್ತಿರುವ ಸಂದರ್ಭದಲ್ಲಿ ಪಡೆಯಬಹುದಾದ ಶುಲ್ಕ, ಮಕ್ಕಳನ್ನು ಶಾಲೆಗೆ ಕರೆತರಲು ಮತ್ತು ಬಿಡಲು ನೀಡಲಾದ ವಾಹನ ಶುಲ್ಕ, ಇತರೆ ಶುಲ್ಕಗಳನ್ನು ಪಡೆಯಬಹುದಾಗಿದೆ. ಇದೆಲ್ಲದರ ಜತೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಳೆದ ಮೂರು ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಅಥವಾ ಸಿಬಿಎಸಿಇ-10, ಐಸಿಎಸ್‌ಇ-10, ಪಿಯುಸಿ, ಸಿಬಿಎಸ್‌ಇ-12 ಮತ್ತು ಐಸಿಎಸ್‌ಇ-12ನೇ ತರಗತಿಯ ಪಬ್ಲಿಕ್‌ ಪರೀಕ್ಷೆಯಲ್ಲಿ ಪಡೆದ ಫ‌ಲಿತಾಂಶವನ್ನು ಕಡ್ಡಾಯವಾಗಿ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಸೂಚಿಸಿದೆ.

ಅಧಿಕಾರಿಗಳಿಂದ ನಿಗಾ: ಶಾಲೆಗಳು ವಿದ್ಯಾರ್ಥಿಗಳ ಪಾಲಕ, ಪೋಷಕರಿಂದ ಪಡೆಯಬಹುದಾದ ದುಬಾರಿ ಶುಲ್ಕಕ್ಕೆ ಇದರಿಂದ ಕಡಿವಾಣ ಹಾಕಲು ಸಾಧ್ಯ. ಜತೆಗೆ ಶಾಲೆಯ ವ್ಯವಸ್ಥೆ, ವಿದ್ಯಾರ್ಥಿಗಳ ಮಾಹಿತಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮಾಹಿತಿ ಹಾಗೂ ಫ‌ಲಿತಾಂಶ ಇತ್ಯಾದಿ ಎಲ್ಲ ಅಂಶಗಳು ಪಾಲಕ-ಪೋಷಕರು ವೆಬ್‌ಸೈಟ್‌ ಮೂಲಕ ತಿಳಿದು ಕೊಂಡು ಮಕ್ಕಳನ್ನು ಶಾಲೆಗೆ ಸೇರಿಸಲು ಅನುಕೂಲ ವಾಗಲಿದೆ. ವೆಬ್‌ಸೈಟ್‌ನಲ್ಲಿ ಅನುದಾನ ರಹಿತ ಶಾಲೆಗಳು ಮಾಹಿತಿ ಅಪ್‌ಲೋಡ್‌ ಮಾಡಿರುವ ಬಗ್ಗೆ ಇಲಾಖೆ ಅಧಿಕಾರಿಗಳು ನಿಗಾವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.

Comments are closed.