ಕೊಪ್ಪಳ: ಪಶುವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ1) ಮಹಮ್ಮದ್ ಪಾಷಾನಿಗೆ ಕೊಪ್ಪಳದ ಗಂಗಾವತಿ ತಾಲೂಕಿನ ಬಸಾಪಟ್ಟಣದ ನಂಟಿದ್ದು, ಅಮಾನುಷ ಘಟನೆ ಜರುಗುವ 3 ದಿನ ಮುನ್ನ ಬಸಾಪಟ್ಟಣಕ್ಕೆ ಬಂದಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ.
ಹೈದರಾಬಾದ್ ಹೊರವಲಯದ ಚೌಟನಪಲ್ಲಿಯಲ್ಲಿ ಜರುಗಿದ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧ ಪ್ರಮುಖ ಆರೋಪಿ ಮಹ್ಮದ್ ಲಾರಿ ಚಾಲಕನಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಿಗೆ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ. ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ದೊರೆಯುವ ಹಗುರವಾದ ಇಟ್ಟಿಗೆಗಳಿಗೆ ಹೈದರಾಬಾದ್ ಭಾಗದಲ್ಲಿ ಬೇಡಿಕೆಯಿದ್ದು, ಆರೋಪಿ ಕಳೆದ 2 ವರ್ಷಗಳಿಂದ ಬಸಾಪಟ್ಟಣದಿಂದ ಇಟ್ಟಿಗೆಗಳನ್ನು ಕೊಂಡ್ಯೊಯುತ್ತಿದ್ದ. ಅಮಾನುಷ ಘಟನೆ ನವೆಂಬರ್ 27ರಂದು ಜರುಗಿದ್ದು, ಪ್ರಮುಖ ಆರೋಪಿ ಮಹ್ಮದ್ ಆರೋಪಿ ನವೆಂಬರ್ 24ರಂದು ಬಸಾಪಟ್ಟಣದಲ್ಲಿದ್ದ.
ಸ್ಥಳೀಯ ಇಟ್ಟಿಗೆ ಮಾರಾಟದ ದಲ್ಲಾಳಿ ಅಬ್ದುಲ್ ಸೇರಿ ಇತರರನ್ನು ಸಂಪರ್ಕಿಸಿ ಇಟ್ಟಿಗೆಗಳನ್ನು ತನ್ನ ಲಾರಿಗೆ ಲೋಡ್ ಮಾಡಿಕೊಂಡಿದ್ದ. ದಾಸನಾಳದ ಎಡದಂಡೆ ಕಾಲುವೆ ಬಳಿಯಿರುವ ಪ್ರಭು ಎಂಬುವರ ಇಟ್ಟಿಗೆ ಭಟ್ಟಿಯಿಂದಲೇ ಇಟ್ಟಿಗೆಗಳನ್ನು ಲೋಡ್ ಮಾಡಿಕೊಂಡಿದ್ದು, ಹೊರ ರಾಜ್ಯಕ್ಕೆ ತೆರಳುವಾಗ ಟೋಲ್‍ಗೇಟ್‍ನಲ್ಲಿ ಟೋಕನ್ ನೀಡುವ ವ್ಯವಸ್ಥೆಯಿದ್ದು, ಟೋಕನ್ ಇಲ್ಲದಿದ್ದರಿಂದ ಹೈದರಾಬಾದ್ ತಲುಪುವುದು ಒಂದು ದಿನ ತಡವಾಗಿದೆ. ಹೀಗಾಗಿ ಖರೀದಿದಾರ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹೊರವಲಯದಲ್ಲಿ ತಂಗಿದ್ದರು. ಹೊಸ ಆರ್ಡರ್ ದೊರೆತಿದ್ದರಿಂದ ದಲ್ಲಾಳಿ ಅಬ್ದುಲ್, ಮಹ್ಮದ್‍ಗೆ ಪೋನಿನ ಮೂಲಕ ಸಂಪರ್ಕಿಸಲು ಯತ್ನಿಸಿದರು.
ಬಸಾಪಟ್ಟಣದ ದಲ್ಲಾಳಿಗಳಿಂದ ಆರೋಪಿಗಳ ದೂರವಾಣಿಗೆ ಕರೆ ಹೋಗಿದೆ. ಇದೇ ಆಧಾರದಡಿ ತೆಲಂಗಾಣದ ಪೊಲೀಸರು ಘಟನೆ ನಡೆದ 2 ದಿನದ ನಂತರ ಬಸಾಪಟ್ಟಣಕ್ಕೆ ಮಫ್ತಿಯಲ್ಲಿ ಆಗಮಿಸಿದ್ದಾರೆ. ಎಎಸ್ಪಿ ನೇತೃತ್ವದ ನಾಲ್ವರು ಪೊಲೀಸರ ತಂಡ ಅಬ್ದುಲ್ ಸೇರಿ ಇತರೆ ದಲ್ಲಾಳಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಸಾಪಟ್ಟಣದಿಂದ ಗಂಗಾವತಿವರೆಗಿನ ರಾಜ್ಯಹೆದ್ದಾರಿಯಲ್ಲಿರುವ ಮೂರು ಪೆಟ್ರೋಲ್ ಬಂಕ್, ಎರಡು ಬೈಕ್ ಶೋರೂಂ ಸೇರಿದಂತೆ ಖಾಸಗಿ ವ್ಯಕ್ತಿಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕೆಲವಡೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪಡೆದಿರುವ ಮಾಹಿತಿಯಿದೆ.
ತೆಲಂಗಾಣ ಪೊಲೀಸರು ಇಟ್ಟಿಗೆ ಭಟ್ಟಿಗೆ ಆಗಮಿಸಿರುವುದನ್ನು ತಯಾರಕರು ಒಪ್ಪಿಕೊಂಡಿದ್ದರೂ, ಈ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಲು ಹೆದರುತ್ತಿದ್ದಾರೆ. ಮಹ್ಮದ್ ಆಗಾಗ್ಗೆ ಬರುತ್ತಿರುವ ಬಗ್ಗೆ ತಯಾರಕರ ಗುಂಪಿನ ಪ್ರಮುಖರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರ ನೆರವಿಲ್ಲದೇ 2 ದಿನ ಬಸಾಪಟ್ಟಣ, ದಾಸನಾಳ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ತೆಲಂಗಾಣ ಪೊಲೀಸರು ಸಂಚರಿಸಿದ್ದು ಅಚ್ಚರಿ ಮೂಡಿಸಿದೆ.
Comments are closed.