ಕರ್ನಾಟಕ

ಯುವತಿಯರನ್ನು ಖುದ್ದಾಗಿ ಕರೆಸುತ್ತಿದ್ದ ಶಾಸಕರು; ಹನಿಟ್ರ್ಯಾಪ್‌ನಲ್ಲಿ ಭಾರೀ ಕುಳಗಳ ಟ್ರ್ಯಾಪ್‌?

Pinterest LinkedIn Tumblr


ಬೆಂಗಳೂರು: ರಾಜ್ಯದ ಕೆಲ ಮಾಜಿ ಸಚಿವರು ಹಾಗೂ ಶಾಸಕರ “ಹನಿಟ್ರ್ಯಾಪ್‌’ ಪ್ರಕರಣದ ಜಾಲ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಎಲೆಕ್ಟ್ರಾನಿಕ್ಸ್‌ ಸಾಧನಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳ ವಿಡಿಯೋಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಜತೆಗೆ, ಆರೋಪಿತರೂ ಇನ್ನೂ ಹಲವು ಮಂದಿಯನ್ನು ಹನಿಟ್ರ್ಯಾಪ್‌ ಖೆಡ್ಡಾಗೆ ಬೀಳಿಸಿ ಹಣ ಸುಲಿಗೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಮತ್ತೂಂದೆಡೆ ಹನಿಟ್ರ್ಯಾಪ್‌ಗೆ ಬಿದ್ದಿರುವ ಶಾಸಕರು, ಯುವತಿಯರನ್ನು ತಾವೇ ಖುದ್ದಾಗಿ ಬೇಡಿಕೆ ಇಟ್ಟು ಕರೆಸಿಕೊಳ್ಳುತ್ತಿದ್ದರು. ಈ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕ ಜಾಲ, ಅವರ
ವಿಡಿಯೋ ಮಾಡಿ ಹಣ ಸುಲಿಗೆ ಮಾಡುವ ಯೋಜನೆಗೆ ಕೈ ಹಾಕಿತ್ತು ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿ ರಘು ಬಳಿ ಏಳಕ್ಕೂ ಅಧಿಕ ಮೊಬೈಲ್‌ಗ‌ಳು, ಹದಿನೈದು ಸಿಮ್‌ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು ಅವುಗಳಿಂದಲೂ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ವಿಸ್ತರಿಸಿಕೊಂಡಿರುವ ಈ ಹನಿಟ್ರ್ಯಾಪ್‌ ಜಾಲದಲ್ಲಿ ಸಕ್ರಿಯಗೊಂಡಿರುವ ಹಲವು
ತಂಡಗಳ ಪ್ರಮುಖ ಆರೋಪಿಗಳು ಬಂಧನವಾಗುತ್ತಿದ್ದಂತೆ ಕೆಲವರು ತಲೆಮರೆಸಿ ಕೊಂಡಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೋರ್ಟ್‌ ಮೊರೆ: ಹನಿಟ್ರ್ಯಾಪ್‌ ಸುಳಿಯಿಂದ ಕಂಗಾಲಾಗಿರುವ ಹಲವು ಮಂದಿ ಶಾಸಕರು ಇದೀಗ
ಕೋರ್ಟ್‌ ಮೊರೆಹೋಗುತ್ತಿದ್ದಾರೆ. ಸುದ್ದಿ ಹಾಗೂ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ
ನೀಡುವಂತೆ ಕೋರಿ ಕೆಲ ಶಾಸಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮೂವರಿಗೆ
ನ್ಯಾಯಾಲಯದಲ್ಲಿ ರಿಲೀಫ್ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಇತ್ಯರ್ಥಕ್ಕೆ ಯತ್ನ
ಈ ಬೆಳವಣಿಗೆಗಳ ನಡುವೆಯೇ ಹನಿಟ್ರ್ಯಾಪ್‌ನೊಳಗೆ ಸಿಲುಕಿರುವ ಹಲವು ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳು ದಿಕ್ಕುತೋಚದೆ ಒದ್ದಾಡುತ್ತಿದ್ದಾರೆ. ದೂರು ದಾಖಲಿಸದೇ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಪೊಲೀಸ್‌ ಇಲಾಖೆ ಮೊರೆಹೋಗುತ್ತಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳ ಬಳಿ ಮಾತುಕತೆ ನಡೆಸಿ ಗೌಪ್ಯವಾಗಿ ಪ್ರಕರಣ ಇತ್ಯರ್ಥ ಮಾಡಿಸುವಂತೆ ಕೇಳುತ್ತಿದ್ದಾರೆ
ಎಂದು ಹೇಳಲಾಗುತ್ತಿದೆ. “ಹನಿಟ್ರ್ಯಾಪ್‌ಗೆ ಒಳಗಾಗಿರುವ ಯಾರೇ ಇದ್ದರೂ ಮಾಹಿತಿ ಹಂಚಿಕೊಂಡು ತನಿಖೆಗೆ ಸಹಕರಿಸುವಂತೆ ಪೊಲೀಸ್‌ ಇಲಾಖೆ ಕೋರಿದೆ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಟ್ಟು ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

Comments are closed.