
ಶಿವಮೊಗ್ಗ: ಇತ್ತೀಚಿಗೆ ಬಂಗಾರ, ಈರುಳ್ಳಿ ಕದಿಯುತ್ತಿದ್ದ ಸುದ್ದಿ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಅಸಾಮಿ ಮಹಿಳೆಯರ ಒಳಉಡುಪನ್ನೇ ಕದಿಯುತ್ತಿರುವ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ವಿಚಿತ್ರವಾದರೂ ಸತ್ಯ. ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವುದಕ್ಕೆ ಹಾಕುತ್ತಿದ್ದರು. ಆದರೆ ಪ್ರತಿಬಾರಿ ಬಟ್ಟೆ ಒಣ ಹಾಕುವಾಗಲೂ ಮಹಿಳೆಯರ ಒಳಉಡುಪು ಕಾಣೆಯಾಗುತ್ತಿದ್ದವು. ಹೀಗಾಗಿ ರಹಸ್ಯ ಭೇದಿಸಲು ಹೊರಟ ಮನೆ ಮಾಲೀಕ ಸತೀಶ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.
ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಒಣಗಲು ಹಾಕಿದ್ದ ಬೇರಾವುದೇ ಬಟ್ಟೆಯನ್ನು ಮುಟ್ಟದೇ ಕೇವಲ ಮಹಿಳೆಯರ ಒಳಉಡುಪಿಗೆ ಮಾತ್ರ ಕೈ ಹಾಕಿದ್ದ. ಆ ಸೈಕೋ ವ್ಯಕ್ತಿ ಉಡುಪು ಕದಿಯುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದವು. ಆ ಬಳಿಕ ಒಳಉಡುಪು ಕದಿಯುತ್ತಿದ್ದ ವ್ಯಕ್ತಿಯನ್ನು ಅದೇ ಗ್ರಾಮದ ಮನುಕುಮಾರ್ ಎಂದು ಪತ್ತೆ ಹಚ್ಚಲಾಗಿತ್ತು.
ಈ ಬಗ್ಗೆ ಗ್ರಾಮಸ್ಥರು ಮನುಕುಮಾರ್ ನನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದಾಗ ಬೇರೆ ದಾರಿ ಕಾಣದೇ ಅದು ನಾನೇ ಎಂದು ಒಪ್ಪಿಕೊಂಡಿದ್ದಾನೆ. ಘಟನೆ ಬಳಿಕ ಸೈಕೋ ಮನುಕುಮಾರ್ ಕುಟುಂಬಸ್ಥರು ಮನೆ ಮಾಲೀಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.