ಕರ್ನಾಟಕ

ಭಿನ್ನ ಕೋಮಿನ ಹುಡುಗ-ಹುಡುಗಿ ಸೆಲ್ಫಿ: ಶಿವಮೊಗ್ಗದಲ್ಲಿ ನೈತಿಕ ಪೊಲೀಸರ ಪುಂಡಾಟ

Pinterest LinkedIn Tumblr


ಶಿವಮೊಗ್ಗ: ಭಿನ್ನ ಕೋಮಿನ ಯುವಕ-ಯುವತಿ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಆಕ್ಷೇಪವೆತ್ತಿ ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ ನಡೆದಿದೆ.

ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಸಂತ್ರಸ್ತ ಯುವಕ-ಯುವತಿ ಪರಸ್ಪರ ಸ್ನೇಹಿತರಾಗಿದ್ದಾರೆ. ಕಾಲೇಜಿನ ಪ್ರಾಜೆಕ್ಟ್ ಕೆಲಸಕ್ಕಾಗಿ ಜೊತೆಗೆ ಬಂದಿದ್ದ ಇಬ್ಬರು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಪಕ್ಷಿಧಾಮಕ್ಕೆ ಭೇಟಿ ನೀಡಿದ್ದರು.

ಇವರ ಚಲನವಲನಗಳನ್ನು ಗಮನಿಸಿದ ಮುಸ್ಲಿಂ ಯುವಕರ ತಂಡ ಬುರ್ಖಾಧಾರಿ ಯುವತಿಯ ಜೊತೆಗಿದ್ದ ಯುವಕ ಭಿನ್ನಕೋಮಿನವನಾಗಿದ್ದಾನೆ ಎಂಬ ಕಾರಣ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ. ಈ ವೇಳೆ ಯುವಕನ ಮೇಲೆ ಎಂಟು ಮಂದಿ ಪುಂಡರ ತಂಡ ಅಮಾನುಷವಾಗಿ ಹಲ್ಲೆ ನಡೆಸಿದೆ.

ನೈತಿಕ ಪೊಲೀಸ್‌ಗಿರಿ ನಡೆಸಿರುವುದನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ಕಾಣುವಂತೆ ಯುವತಿ ತಮ್ಮನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಗೋಗರೆದರೂ ಎಳೆದಾಡಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಸಂತ್ರಸ್ತ ಯುವಕ ನೆಲಕ್ಕೆ ಬಿದ್ದರೂ ಅಮಾನವೀಯವಾಗಿ ಥಳಿಸಿದ್ದಾರೆ. ಬಳಿಕ ಸ್ಥಳೀಯರು ಬಂದು ನೈತಿಕ ಪೊಲೀಸರಿಂದ ಯುವಕ-ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ನವೆಂಬರ್ 11 ರಂದು ಈ ಘಟನೆ ನಡೆದಿದ್ದು ವಿಡಿಯೋದಲ್ಲಿ ಕಾಣಿಸಿಕೊಂಡ ಸೈಯದ್ ಸಾದಿಕ್ ,ಮುಹಮ್ಮದ್ ಹನೀಫ್, ರಿಜ್ವಾನ್, ಸೈಯದ್ ಇಝಾಜ್ ಸೇರಿದಂತೆ ಒಟ್ಟು 8 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆಯ ಕುರಿತಾಗಿ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತಾಗಿ ವಿಜಯಕರ್ನಾಟಕದ ಜೊತೆಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜ್, “ನವೆಂಬರ್ 11 ರಂದು ಈ ಘಟನೆ ನಡೆದಿದ್ದು ಭಿನ್ನ ಕೋಮಿನ ಯುವಕ-ಯುವತಿ ಜೊತೆಗೆ ಕಾಣಿಸಿಕೊಂಡ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು ಎಂಟು ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಯಾವುದಾದರು ಸಂಘಟನೆಗೆ ಸೇರಿದ್ದಾರಾ ಎಂಬ ಕುರಿತಾಗಿ ತನಿಖೆ ನಡೆಯುತ್ತಿದೆ” ಎಂದರು

ಶಿವಮೊಗ್ಗದ ಮಂಡಗದ್ದೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಘಟನೆಯನ್ನು ಖಂಡಿಸಿರುವ ಶಿವಮೊಗ್ಗದ ಕವಿ, ಲೇಖಕಿ ಅಕ್ಷತಾ ಹುಂಚದಕಟ್ಟೆ “ಹೆಣ್ಣು ಗಂಡಿನೊಂದಿಗೆ ಸಹಜ ಸ್ನೇಹದಲ್ಲಿ ಒಡನಾಡುವುದು, ಸಮಾನವಾಗಿ ಬದುಕುವುದು, ವೈಚಾರಿಕವಾಗಿ ಬೆಳೆಯುವುದು ಸಮಾಜದ ಕೆಲವು‌ ದುಷ್ಟಜಂತುಗಳಿಗೆ ಸಹಿಸಲಾಗುವುದಿಲ್ಲ. ಅಂಥವರು ಧರ್ಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯವೆಸಗುವ ಮೂಲಕ ಸಮಾನ ಸಮಾಜ ನಿರ್ಮಾಣವಾಗದಂತೆ ತಡೆಯಲು ಆಸಕ್ತರಾಗಿದ್ದಾರೆ.. ಇಂಥ ದುಷ್ಟ ಜಂತುಗಳು ಎಲ್ಲ ಧರ್ಮಗಳಲ್ಲು ಇದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಶಿಕ್ಷೆಗೊಳಪಡಿಸಬೇಕು. ಈ ಪ್ರಕರಣದಲ್ಲಿ‌ ಕ್ರಮ ಕೈಗೊಂಡ‌ ಶಿವಮೊಗ್ಗ ಪೊಲೀಸರು ಅಭಿನಂದನಾರ್ಹರು” ಎಂದಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯಲ್ಲೂ ನೈತಿಕ ಪೊಲೀಸ್‌ಗಿರಿ ನಡೆದಿತ್ತು. ಭಿನ್ನ ಕೋಮಿನ ಕಾಲೇಜು ವಿದ್ಯಾರ್ಥಿಗಳು ಕಾರಲ್ಲಿ ಜೊತೆಗೆ ಸುತ್ತಾಡಿದಕ್ಕಾಗಿ ತಡೆದು ಹಲ್ಲೆ ನಡೆಸಿದ್ದರು. ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಇದೀಗ ರಾಜ್ಯದ ಇತರ ಜಿಲ್ಲೆಗಳಿಗೂ ಕಾಲಿಟ್ಟಿರುವುದು ಅಪಾಯಕಾರಿ ಬೆಳವಣಿಗೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.