ಕರ್ನಾಟಕ

ಟಿಕ್ ಟಾಕ್‍ ಪರಿಚಯ: ಮದುವೆಯ ಭರವಸೆ ನೀಡಿ 4 ಲಕ್ಷ ರೂ. ದೋಚಿದ ಆಂಟಿ

Pinterest LinkedIn Tumblr


ಬೆಂಗಳೂರು: ಟಿಕ್ ಟಾಕ್‍ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಮದುವೆಯಾಗುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬನಿಂದ 4 ಲಕ್ಷ ರೂ. ಪೀಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ವಿಜಯಲಕ್ಷ್ಮಿ ಹಣ ಪೀಕಿದ ಮಹಿಳೆ. ದೊಮ್ಮಲೂರು ನಿವಾಸಿ ಶಿವಕುಮಾರ್ ವಂಚನೆಗೆ ಒಳಗಾದ ವ್ಯಕ್ತಿ. ಈ ಪ್ರಕರಣದ ಮತ್ತೋರ್ವ ಆರೋಪಿ ಮಧು ಕೊಲ್ಯಾನ್, ಶಿವಕುಮಾರ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

ಶಿವಕುಮಾರ್ ಟಿಕ್ ಟಾಕ್‍ನಲ್ಲಿ ವಿಜಯಲಕ್ಷ್ಮಿಯ ಅನೇಕ ವಿಡಿಯೋಗಳಿಗೆ ಲೈಕ್ ಮಾಡಿದ್ದ. ಅಷ್ಟೇ ಅಲ್ಲದೆ ಫೇಸ್‍ಬುಕ್ ನಲ್ಲಿ ಇಬ್ಬರು ಫ್ರೆಂಡ್ ಆಗಿದ್ದರು. ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು.

ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್‍ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಳು. ಹೀಗಾಗಿ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ಬಿಟ್ಟಿದ್ದಳು. ಇದಾದ ಬಳಿಕವೂ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು.

ಶಿವಕುಮಾರ್ ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿಗೆ ಹಣ ನೀಡುವುದನ್ನು ನಿಲ್ಲಿಸಿದ್ದ. ಇದರಿಂದಾಗಿ ಆರೋಪಿಯು ತನ್ನ ಸ್ನೇಹಿತ ಮಧು ಕೊಲ್ಯಾನ್‍ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಾಳೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಈ ಸಂಬಂಧ ಶಿವಕುಮಾರ್ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆರೋಪಿ ವಿಜಯಲಕ್ಷ್ಮಿ ಹಾಗೂ ಮಧು ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Comments are closed.