
ಬೆಂಗಳೂರು(ನ. 15): ನಗರದ ರೇಸ್ ಕೋರ್ಸ್ನಲ್ಲಿ ಇವತ್ತು ದೊಡ್ಡಮಟ್ಟದ ಗಲಾಟೆಯೇ ನಡೆದುಹೋಗಿದೆ. ಕುದುರೆ ರೇಸ್ ನೋಡಲು ಬಂದಿದ್ದ ಸಾರ್ವಜನಿಕರು ಆವರಣದಲ್ಲಿ ದೊಡ್ಡ ರಂಪಾಟವನ್ನೇ ನಡೆಸಿದ್ದಾರೆ. ಇಂದು ನಡೆದ ರೇಸ್ ವೇಳೆ ಕುದುರೆಯೊಂದು ಕಾಲು ಮುರಿದುಕೊಂಡು ಬಿದ್ದದ್ದು ಈ ಘಟನೆಗೆ ಕಾರಣವಾಗಿದೆ. ಕಾಲುಮುರಿದುಕೊಂಡ ಕುದುರೆಯ ಬಾಲಕ್ಕೆ ಹಣ ಕಟ್ಟಿದ ಜನರೇ ಗಲಾಟೆಯಲ್ಲಿ ತೊಡಗಿದ್ದು ತಿಳಿದುಬಂದಿದೆ.
ಇವತ್ತಿನ ರೇಸ್ನಲ್ಲಿ ಕಾಲು ಮುರಿದುಕೊಂಡು ಬಿದ್ದ ಕುದುರೆಯ ಹೆಸರು ವಿಲ್ ಟು ವಿನ್ ಆಗಿದೆ. ಸಂಜಯ್ ಆರ್. ಠಕ್ಕರೆ ಎಂಬುವರು ಈ ಕುದುರೆಯ ಮಾಲೀಕರಾದರೆ, ಪಾರ್ವತಿ ಡಿ. ಭೈರಾಂಜಿ ಅವರು ಟ್ರೈನರ್ ಆಗಿದ್ದಾರೆ.
ನಿನ್ನೆ ನಡೆದ ರೇಸ್ನಲ್ಲಿ ಸೂರಜ್ ನೆರ್ರಾಡು ಎಂಬಾತ ಜಾಕಿಯಾಗಿ ಈ ಕುದುರೆ ಏರಿದ್ದ. ರೇಸ್ ಪ್ರಾರಂಭವಾಗಿ ಸ್ವಲ್ಪ ಹೊತ್ತಿನಲ್ಲೇ ವಿಲ್ ಟು ವಿನ್ ಕುದುರೆ ಕಾಲು ಮುರಿದುಕೊಂಡಿದೆ. ಕುದುರೆ ಮೇಲಿದ್ದ ಜಾಕಿ ಕೆಳಗೆ ಎಗರಿದರು. ಹಿಂದೆ ಬರುತ್ತಿದ್ದ ಇನ್ನೂ ಒಂದೆರಡು ಕುದುರೆಗಳ ಜಾಕಿಗಳು ಕೆಳಗೆ ಆಯತಪ್ಪಿ ಬಿದ್ದಿದ್ದಾರೆ. ಈ ರೇಸ್ನಲ್ಲಿ ನಯಾಬ್ ಎಂಬ ಕುದುರೆ ಪ್ರಥಮ ಸ್ಥಾನ ಪಡೆಯಿತು. ಕಾಲು ಮುರಿದುಕೊಂಡ ಕುದುರೆಗೆ ಹಣ ಕಟ್ಟಿದ್ದವರು ಹತಾಶೆಗೊಂಡು ರೇಸ್ಕೋರ್ಸ್ನಲ್ಲಿ ಗಲಾಟೆ ನಡೆಸಿದರೆನ್ನಲಾಗಿದೆ.
ಟ್ರ್ಯಾಕ್ ಅಪಾಯಕಾರಿಯಾಗಿದೆ ಎಂಬ ವರದಿ ಬಂದರೂ ರೇಸ್ ಕೋರ್ಸ್ ಮ್ಯಾನೇಜ್ಮೆಂಟ್ ಅವರು ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದು ಜನರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಪ್ರತೀ ರೇಸ್ ಸೀಸನ್ ಪ್ರಾರಂಭವಾಗುವ ಮುನ್ನ ಟ್ರ್ಯಾಕ್ನ ಸ್ಥಿತಿಯನ್ನು ಪರೀಕ್ಷಿಸಲು ಮಾಕ್ ಸ್ಪರ್ಧೆ ಅಂದರೆ ಪರೀಕ್ಷಾರ್ಥ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ನ. 8ರಂದು ನಡೆದ ಮಾಕ್ ಟೆಸ್ಟ್ನಲ್ಲಿ ಜಾಕಿಗಳು ಈ ಟ್ರ್ಯಾಕ್ನಲ್ಲಿ ಕುದುರೆ ಓಡಿಸಲು ಕಷ್ಟವಾಗಬಹುದು. ಅಧಿಕೃತವಾಗಿ ಸ್ಪರ್ಧೆಯ ಸೀಸನ್ ಆರಂಭಿಸುವ ಮುನ್ನ ಇನ್ನೂ ಕೆಲ ಬಾರಿ ಮಾಕ್ ಟೆಸ್ಟ್ಗಳು ಆಯೋಜಿಸಿರಿ ಎಂದು ಸಲಹೆ ನೀಡಿ ವರದಿ ಕೊಟ್ಟಿದ್ದರು. ಆದರೂ ಕೂಡ ರೇಸ್ ಕೋರ್ಸ್ ಆಡಳಿತ ಮಂಡಳಿಯು ಸ್ಪರ್ಧೆ ನಡೆಸಿರುವುದು ತಿಳಿದುಬಂದಿದೆ.
Comments are closed.