ರಾಷ್ಟ್ರೀಯ

ಗಾಂಧೀಜಿ ಸಾವು ಆಕಸ್ಮಿಕ ಎಂದು ಕಿರುಹೊತ್ತಿಗೆಯಲ್ಲೇ ಪ್ರಮಾದ; ಒಡಿಶಾ ಸರ್ಕಾರ ವಿರುದ್ಧ ಭುಗಿಲೆದ್ದ ಆಕ್ರೋಶ

Pinterest LinkedIn Tumblr


ಪಟ್ನಾ(ನ. 15): ಮಹಾತ್ಮ ಗಾಂಧಿಜೀ ಸಾವಿಗೆ ಕಾರಣ ಆಕಸ್ಮಿಕ ಎಂದು ಒಡಿಶಾ ಸರ್ಕಾರ ಪ್ರಕಟಿಸಿರುವ ಕಿರು ಪುಸ್ತಕ ಈಗ ವಿವಾದಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿಜೀ 150ನೇ ಜನ್ಮದಿನ ಅಂಗವಾಗಿ ಸರ್ಕಾರ ಪ್ರಕಟಿಸಿರುವ ಕಿರುಹೊತ್ತಿಗೆಯಲ್ಲಿ ಈ ಪ್ರಮಾದ ನಡೆದಿದ್ದು, ಈ ಕುರಿತು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಕ್ಷಮೆಯಾಚಿಸಿ, ತಕ್ಷಣ ಈ ತಪ್ಪನ್ನು ಸರಿಪಡಿಸಬೇಕು ಎಂದು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.

‘ನಮ್ಮ ಬಾಪುಜಿ; ಒಂದು ಕಿರು ನೋಟ’ ಎಂದು ಎರಡು ಪುಟಗಳ ಹೊತ್ತಿಗೆಯನ್ನು ಮಹಾತ್ಮ ಗಾಂಧಿ ಜಯಂತಿಯನ್ನು ಸರ್ಕಾರ ಹೊರತಂದಿದೆ. ಇನ್ನು ಈ ಹೊತ್ತಿಗೆಯನ್ನು ರಾಜ್ಯದ ಸರ್ಕಾರ ಹಾಗೂ ಸರ್ಕಾರೇತರ ಶಿಕ್ಷಣ ಸಂಸ್ಥೆಗಳಿಗೆ ಕೂಡ ಹಂಚಲಾಗಿದೆ.

ಈ ಕಿರುಹೊತ್ತಿಗೆಯಲ್ಲಿ ಮಹಾತ್ಮ ಗಾಂಧಿ ಅವರ ಕೆಲಸ, ವಿಚಾರ ಹಾಗೂ ಒಡಿಶಾ ಜೊತೆ ಅವರಿಗಿದ್ದ ನಂಟು ಇತ್ಯಾದಿ ಬಗ್ಗೆ ವಿವರಗಳಿವೆ. 1948, ಜನರಿ 30ರಂದು ದೆಹಲಿಯ ಬಿರ್ಲಾ ಹೌಸ್​ನಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಆಕಸ್ಮಿಕ ಕಾರಣಗಳಿಂದ ಗಾಂಧಿಜೀ ಮೃತಪಟ್ಟರು ಎಂದೂ ಇದರಲ್ಲಿ ಮಾಹಿತಿ ನೀಡಲಾಗಿದೆ.

ಈ ಪ್ರಮಾದ ಕುರಿತು ಟೀಕಿಸಿರುವ ಕಾಂಗ್ರೆಸ್​ ಇದು ಕ್ಷಮಿಸಲಾರದ ಕೆಲಸ. ಈ ಕುರಿತು ಸರ್ಕಾರ ಕ್ಷಮೆಯಾಚಿಸಬೇಕು. ಈ ತಪ್ಪಿನ ಹೊಣೆಯನ್ನು ಸಿಎಂ ಪಟ್ನಾಯಕ್​ ತೆಗೆದುಕೊಳ್ಳಬೇಕು. ಈ ಹೊತ್ತಿಗೆಗಳನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಮಾಜಿ ಸಚಿವ ನರಸಿಂಗ ಮಿಶ್ರಾ ಆಗ್ರಹಿಸಿದ್ದಾರೆ.

ಬಿಜು ಜನತಾ ದಳ ನಾಯಕರು ಗಾಂಧಿ ವಿರೋಧಿಗಳ ಪರವಾಗಿದ್ದಾರೆ. ಗಾಂಧಿಜಿಯನ್ನು ಯಾಕೆ, ಯಾರು ಕೊಂದರು ಎಂಬುದನ್ನು ಮಕ್ಕಳು ತಿಳಿಯಬೇಕು. ಮಹಾತ್ಮ ಗಾಂಧಿ ಹಂತಕರನ್ನು ಒಲೈಸುವ ದೃಷ್ಟಿಯಿಂದ ಈ ರೀತಿ ಬರೆಯಲಾಗಿದೆ ಎಂದು ಕೂಡ ಹರಿಹಾಯ್ದಿದ್ದಾರೆ.

ಪ್ರಕರಣ ಬೆಳಕಿಗೆ ಬಂದು ವಿವಾದ ಸುತ್ತಿಕೊಳ್ಳುತ್ತಿದ್ದಂತೆಯೇ ಒಡಿಶಾ ಸಿಎಂ ನವೀಣ್ ಪಟ್ನಾಯಕ್ ಅವರು ತನಿಖೆಗೆ ಆದೇಶಿಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸಮೀರ್ ರಂಜನ್ ದಾಶ್ ಸ್ಪಷ್ಟಪಡಿಸಿದ್ಧಾರೆ.

Comments are closed.