ಕರ್ನಾಟಕ

ಕಾಗ್ನಿಜೆಂಟ್ ನಿಂದ 12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್

Pinterest LinkedIn Tumblr


ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ.

ಮಧ್ಯಮ ಶ್ರೇಣಿಯಿಂದ ಆರಂಭಗೊಂಡು ಹಿರಿಯ ಶ್ರೇಣಿ ಹೊಂದಿರುವ 10 – 12 ಸಾವಿರ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಲು ಮುಂದಾಗುತ್ತಿದ್ದೇವೆ ಎಂಬುದಾಗಿ ಕಾಗ್ನಿಜೆಂಟ್ ಕಂಪನಿಯ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಟಿಸಿದ್ದಾರೆ.

ಕಾಗ್ನಿಜೆಂಟ್ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ ಎರಡನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಟಾಟಾ ಕನ್ಸಲ್ಟೆಂಟೆನ್ಸಿ ಸರ್ವಿಸಸ್ 4 ಲಕ್ಷ ಉದ್ಯೋಗಿಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್ ಕಾಗ್ನಿಜೆಂಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಫೇಸ್‍ಬುಕ್ ಕೆಲಸಕ್ಕೆ ನಿಯೋಜನೆಗೊಂಡಿದ್ದ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೇ ಓರ್ವ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್‍ಬುಕ್ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ.

ಸಪ್ಟೆಂಬರ್ ನಲ್ಲಿ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಕಾಂಗ್ನಿಜೆಂಟ್ 497 ದಶಲಕ್ಷ ಡಾಲರ್(ಅಂದಾಜು 352 ಕೋಟಿ ರೂ.) ನಿವ್ವಳ ಆದಾಯ ಗಳಿಸಿತ್ತು. ಕಂಪನಿಯ ಆದಾಯ ಶೇ.4.5 ರಷ್ಟು ಏರಿಕೆಯಾಗಿ 4.25 ಶತಕೋಟಿ ಡಾಲರ್(ಅಂದಾಜು 30 ಸಾವಿರ ಕೋಟಿ) ಗಳಿಸಿತ್ತು. ಈ ಹಣಕಾಸು ವರ್ಷದಲ್ಲಿ ಕಂಪನಿ ಶೇ.4.6 – 4.9 ಬೆಳವಣಿಗೆ ಸಾಧಿಸುವ ಗುರಿಯನ್ನು ಹೊಂದಿದೆ.

ಆದಾಯವನ್ನು ಹೆಚ್ಚಿಸಿ ವೆಚ್ಚವನ್ನು ತಗ್ಗಿಸಲು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಗ್ನಿಜೆಂಟ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

Comments are closed.