ಅಂತರಾಷ್ಟ್ರೀಯ

ಐಸಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕ ಬಾಗ್ದಾದಿ ಹತ್ಯೆಗೆ ಸಹಕರಿಸಿದವನಿಗೆ 177 ಕೋಟಿ ರೂ.!

Pinterest LinkedIn Tumblr


ವಾಷಿಂಗ್ಟನ್‌: ಐಸಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಜಾಗತಿಕ ಉಗ್ರ ಅಬು ಬಕರ್ ಅಲ್ ಬಾಗ್ದಾದಿಯ ಬಗ್ಗೆ ಖಚಿತ ಸುಳಿವನ್ನು ನೀಡಿ ಆತನ ವಿರುದ್ಧ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆಗೆ ಸಹಕರಿಸಿದ ವ್ಯಕ್ತಿಗೆ ಅಂದಾಜು 177 ಕೋಟಿ ರೂ. ಬಹುಮಾನ ಸಿಗಲಿದೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.

ಬಾಗ್ದಾದಿಯನ್ನು ಹಿಡಿದುಕೊಟ್ಟವರಿಗೆ 177 ಕೋಟಿ ರೂ. ಬಹುಮಾನವನ್ನು ನೀಡುವುದಾಗಿ ಅಮೆರಿಕ ಈ ಹಿಂದೆಯೇ ಘೋಷಿಸಿತ್ತು. ಆ ಹಣವನ್ನೇ ಬಾಗ್ದಾದಿ ಬಗ್ಗೆ ಸುಳಿವನ್ನು ನೀಡಿದ ವ್ಯಕ್ತಿಗೆ ನೀಡಲಾಗುತ್ತದೆ. ಮಾಹಿತಿ ನೀಡಿದಾತನ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅಮೆರಿಕ, ಸಿರಿಯಾದಲ್ಲಿದ್ದ ಆತನನ್ನು ಹಾಗೂ ಆತನ ಕುಟುಂಬವನ್ನು ಅಮೆರಿಕಕ್ಕೆ ಸ್ಥಳಾಂತರಿಸಿದೆ ಎಂದು ಹೇಳಲಾಗಿದೆ.

ಯಾರು ಆ ವ್ಯಕ್ತಿ?
ಆ ವ್ಯಕ್ತಿಯ ಗುಟ್ಟನ್ನು ಅಮೆರಿಕ ಸರ್ಕಾರ ಬಹಿರಂಗಗೊಳಿಸಿಲ್ಲ. ಆದರೆ, ತಮ್ಮ ಗುರುತನ್ನು ಗೌಪ್ಯವಾಗಿಡುವ ಷರತ್ತಿನ ಮೇರೆಗೆ ಕೆಲವು ಅಧಿಕಾರಿಗಳು ಹಾಗೂ ಒಂದಿಬ್ಬರು ಮಾಜಿ ಅಧಿಕಾರಿಗಳು ಆತನ ಬಗ್ಗೆ ಪರೋಕ್ಷ ಮಾಹಿತಿ ನೀಡಿದ್ದಾರೆ.

ಆ ವ್ಯಕ್ತಿ ಐಸಿಸ್‌ ಸಂಘಟನೆಯಲ್ಲಿ ಹಿಂದೊಮ್ಮೆ ಸಕ್ರಿಯನಾಗಿದ್ದಾತ. ತನ್ನ ಸಂಬಂಧಿಯೊಬ್ಬನ್ನು ಕೊಂದಿದ್ದಕ್ಕೆ ಐಸಿಸ್‌ ವಿರುದ್ಧ ಆಂತರ್ಯದಲ್ಲೇ ತಿರುಗಿಬಿದ್ದಿದ್ದ. ಅ. 26ರಂದು ಬಾಗ್ದಾದಿ ಹತನಾದ ಬಂಗಲೆಯ ನಿರ್ಮಾಣದ ಮೇಲುಸ್ತುವಾರಿ ವಹಿಸಿಕೊಂಡಿದ್ದವರಲ್ಲಿ ಆತನೂ ಒಬ್ಬ. ಅಷ್ಟೇ ಅಲ್ಲ, ಬಾಗ್ದಾದಿಯ ಪತ್ನಿಯರು, ಮಕ್ಕಳು ಅಸ್ವಸ್ಥಗೊಂಡಾಗ ಅವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಬಾಗ್ದಾದಿಯಿದ್ದ ಬಂಗಲೆ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದರಿಂದ ಆತನಿಗೆ ಆ ಬಂಗಲೆಯ ಕೋಣೆ ಕೋಣೆಗಳೂ ಗೊತ್ತಿದ್ದವು. ಆತ ನೀಡಿದ ಮಾಹಿತಿಯಾಧಾರದಲ್ಲಿ ಅಮೆರಿಕ ಸೇನೆಯು ಆ ಬಂಗಲೆಯ ಪೂರ್ಣ ಚಿತ್ರಣ ಪಡೆದಿತ್ತು. ಬಂಗಲೆ ಮೇಲೆ ದಾಳಿ ನಡೆದಾಗ ಆ ವ್ಯಕ್ತಿಯೂ ಸೇನೆಯ ಜತೆಗಿದ್ದ ಎಂದು ತಿಳಿಸಿದ್ದಾರೆ.

Comments are closed.